ಲೋಕಸಭಾ ಚುನಾವಣೆ: ಎ.3ರಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ನಾಮಪತ್ರ ಸಲ್ಲಿಕೆ

Update: 2024-03-26 08:27 GMT

ಮಂಗಳೂರು, ಮಾ. 26: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ತಯಾರಿ ನಡೆದಿದ್ದು, ಸುಮಾರು 50ರಿಂದ 60 ಸಾವಿರ ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ತಯಾರಿ ಕುರಿತಂತೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಸುದ್ದಿಗೋಷ್ಟಿಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.

ತಾವು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವುಗಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೇ ಸುಮಾರು 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ ಎಂದು ಸ್ಥಳೀಯ ಶಾಸಕರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಬಿಜೆಪಿ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಹಾಗಾಗಿ ಅವರ ಹೇಳಿಕೆ ನಮಗೆ ಮುಖ್ಯವಲ್ಲ ಎಂದರು.

ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಲೋಕಸಭಾ ಚುನಾವಣೆಗೆ ತಯಾರಿ ನಡೆದಿದೆ. ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಬೂತ್ ಮಟ್ಟದ ಕಾರ್ಯಕರ್ತರಿಗೆ ತರಬೇತಿ ನೀಡುವ ಕೆಲಸ ಮಾಡಲಾಗಿದೆ. ಪ್ರತಿ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು, ಎ.3ಕ್ಕೆ ದ.ಕ. ಜಿಲ್ಲಾ ಲೋಕಸಭಾ ಸಭಾ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಎಲ್ಲಾ ಬ್ಲಾಕ್ ಗಳಲ್ಲಿ ಮಾ. 27ರಿಂದ 30ರವರೆಗೆ ಬ್ಲಾಕ್, ವಿಧಾನಸಭಾ ಕ್ಷೇತ್ರಗಳ ಸಭೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ದಿನದಂದು ಮಂಗಳೂರು ಪುರಭವದಲ್ಲಿ ಸಮಾವೇಶ ನಡೆದು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಬಳಿಕ ಎ. 11ರಿಂದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಆರಂಭದಲ್ಲಿ ಸುಳ್ಯದಲ್ಲಿ, ಎ. 12ರಂದು ಮೂಡಬಿದ್ರೆ, ಎ.13ರಂದು ಪುತ್ತೂರು, 14ರಂದು ಮಂಗಳೂರು ದಕ್ಷಿಣ, 15ರಂದು ಉಳ್ಳಾಲ, 16ರಂದು ಮಂಗಳೂರು ಉತ್ತರ, 17ರಂದು ಬೆಳ್ತಂಗಡಿ, 18ರಂದು ಬಂಟ್ವಾಳದಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಎ.19ರಿಂದ ಎರಡನೆ ಸುತ್ತಿನ ಮತಯಾಚನೆ ನಡೆಯಲಿದೆ. ಪಕ್ಷದ ವತಿಯಿಂದ ಪ್ರತಿ ಕ್ಷೇತ್ರದ ಮಾಜಿ ಶಾಸಕರು, ಹಾಲಿ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಪ್ರಚಾರ ಕಾರ್ಯ ನಡೆಯಲಿದೆ. ಮಂಗಳೂರು ದಕ್ಷಿಣದಲ್ಲಿ ಮಾಜಿ ಶಾಸಕರಾದ ಜೆ.ಆರ್. ಲೋಬೋ, ಐವನ್ ಲೋಬೋ ಅವರ ಉಸ್ತುವಾರಿಯಲ್ಲಿ, ಸುಳ್ಯದಲ್ಲಿ ಶಕುಂತಳಾ ಶೆಟ್ಟಿ ಮತ್ತು ಜಿ.ಕೃಷ್ಣಪ್ಪ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಯಲಿದೆ ಎಂದು ಅವರು ವಿವರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಪಕ್ಷದ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ವಿದ್ಯಾರ್ಥಿ ಕಾಂಗ್ರೆಸ್ ನಿಂದ ಬೆಳೆದಿರುವ ತನಗೆ ಆರು ಜಿಲ್ಲೆಗಳ ಹೊಸ ಜವಾಬ್ದಾರಿ ನೀಡಿದ್ದಾರೆ ಎಂದರು.

ಕಳೆದ 33 ವರ್ಷಗಳಿಂದ ಕಾಂಗ್ರೆಸ್ ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿಲ್ಲ. ಹೊಸ ಮುಖದ ಬೇಡಿಕೆ ಇದ್ದ ಕಾರಣ ಎಲ್ಲ ನಾಯಕರು ಸೇರಿ ಒಮ್ಮತದ ಅಭ್ಯರ್ಥಿಯನ್ನಾಗಿ ಮಾಡಲು ಮನವಿ ಮಾಡಿದಂತೆ ಪದ್ಮರಾಜ್ ಅವರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ. 33 ವರ್ಷಗಳ ಕಳಂಕ ತೊಡೆದು ಕೈ ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಪ್ರಚಾರ ಸಮಿತಿ ಕಾರ್ಯಾಲಯವನ್ನು ದೇಶ ಕಂಡ ನಿಷ್ಕಳಂಕ ರಾಜಕಾರಣಿ ಜನಾರ್ದನ ಪೂಜಾರಿಯವರು ಉದ್ಘಾಟಿಸಿ ಆಶೀರ್ವಾದ ಮಾಡಿದ್ದಾರೆ ಎಂದು ಅವರು ಹೇಳಿದರು.

ಪಕ್ಷದ ದ.ಕ. ಜಿಲ್ಲಾ ಉಸ್ತುವಾರಿ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ. ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಪ್ರಾಬಲ್ಯ ಇಲ್ಲ ಎಂಬ ಟೀಕೆಯನ್ನು ನಾನು ಒಪ್ಪಲಾರೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳನ್ನು ಗೆದ್ದಿರುವ ಇತಿಹಾಸ ಇದೆ. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಆರ್ಥಿಕ ಶಕ್ತಿ ನೀಡಿದ ಪಕ್ಷ ಕಾಂಗ್ರೆಸ್ ಆಗಿದ್ದು, ಗ್ಯಾರಂಟಿ ಖಂಡಿತ ನಮ್ಮ ಕೈ ಹಿಡಿಯಲಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಘೋಷಿಸಿದಾಗ ಬಿಜೆಪಿಯವರು ಇದನ್ನು ಬೋಗಸ್ ಎಂದು ಹೇಳಿದ್ದರೂ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ 10 ಘೋಷಣೆಯೊಂದಿಗೆ ವಾರ್ಷಿಕ 1 ಲಕ್ಷ ರೂ. ಕುಟುಂಬಕ್ಕೆ ನೀಡುವ ಭರವಸೆ ನೀಡಲಾಗಿದೆ. ನಮ್ಮ ಗ್ಯಾರಂಟಿಗಳ ಮೇಲೆ ಮತದಾರರಿಗೆ ನಂಬಿಕೆ ಇದೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಾತ್ರ ಹಿರಿದಾಗಿದ್ದು, ಪದ್ಮರಾಜ್ ಗೆಲುವಿನ ಮೂಲಕ ಜಿಲ್ಲೆಯ ಅಭಿವೃದ್ಧಿಯ ಪರ್ವಕಾಲಕ್ಕೆ ಮುನ್ನುಡಿ ಹಾಕಲಿದ್ದೇವೆ ಎಂದು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಹೊಸ ಮುಖ ಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರ ಕೂಗಿನಂತೆ ಪದ್ಮರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೀಗ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಅದನ್ನು ನಾವು ಮಾಡಲಿದ್ದು, ಪದ್ಮರಾಜ್ ಗೆ ಸಾಟಿಯಾದ ಅಭ್ಯರ್ಥಿ ಜಿಲ್ಲೆಯಲ್ಲಿ ಇಲ್ಲವಾಗಿದ್ದು, ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಅಭ್ಯರ್ಥಿ ಪದ್ಮರಾಜ್, ಮುಖಂಡರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೋ, ಐವನ್ ಡಿಸೋಜಾ, ರಕ್ಷಿತ್ ಶಿವರಾಂ, ಶಾಹುಲ್ ಹಮೀದ್, ಇನಾಯತ್ ಅಲಿ, ಸದಾಶಿವ ಉಳ್ಳಾಲ್, ಯು.ಕೆ. ಮೋನು ಮೊದಲಾದವರು ಉಪಸ್ಥಿತರಿದ್ದರು.

ದ.ಕ. ಜಿಲ್ಲೆಯ ಉಸ್ತುವಾರಿ ರಮಾನಾಥ ರೈ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಉಸ್ತುವಾರಿಯನ್ನಾಗಿ ಪಕ್ಷದ ವರಿಷ್ಟರು ಮಾಜಿ ಸಚಿವ ರಮಾನಾಥ ರೈ ಅವರನ್ನು ನೇಮಕ ಮಾಡಿದ್ದು, ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಚಾರ ಸಭೆ ಹಾಗೂ ಕಾರ್ಯಕ್ರಮಗಳು ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.

ಪುತ್ತೂರಿನಲ್ಲಿ ಜಿಲ್ಲಾ ಕಾರ್ಯಕ್ರಮ

ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಕಾರ್ಯಕ್ರಮ ಈಗಾಗಲೇ ನಡೆದಿರುವುದರಿಂದ ಜಿಲ್ಲಾ ಮಟ್ಟದ ಇನ್ನೊಂದು ಕಾರ್ಯಕ್ರಮ ಪುತ್ತೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ದಿನಾಂಕ ಇನ್ನಷ್ಟೆ ನಿಗದಿಯಾಗಬೇಕಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News