ಮಂಗಳೂರು: ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ

Update: 2023-11-09 15:52 GMT

ಮಂಗಳೂರು: ನಗರದ ಬ್ಯಾಂಕ್‌ವೊಂದರ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಚಾಕುವಿನಿಂದ ಕತ್ತು ಸೀಳಿ ಮತ್ತು ಹೊಟ್ಟೆಗೆ ಇರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಗುರುವಾರ ನಡೆದಿರುವುದಾಗಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಮೂಲತಃ ಕಾರ್ಕಳದ ಪ್ರಸ್ತುತ ನಗರದ ಬೋಂದೆಲ್‌ನಲ್ಲಿ ವಾಸವಾಗಿದ್ದ ವಾದಿರಾಜ ಕೆ.ಎ. (51) ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ಅಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಪ್‌ವೆಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬ್ಯಾಂಕ್‌ನಲ್ಲಿ ಚೀಫ್ ಕಂಪ್ಲಾಯನ್ಸ್ ಅಧಿಕಾರಿಯಾಗಿದ್ದ ವಾದಿರಾಜ ತನ್ನ ಕುಟುಂಬದ ಜೊತೆ ಬೊಂದೇಲ್ ಚರ್ಚ್ ಬಳಿಯ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಗುರುವಾರ ಅವರ ಪತ್ನಿಯು ಮಗಳ ಜೊತೆ ಶಾಲೆಯ ಪೋಷಕರ ಸಭೆಗೆ ತೆರಳಿದ್ದರು. ಇನ್ನೊಬ್ಬ ಮಗಳು ಕಾಲೇಜಿಗೆ ತೆರಳಿದ್ದರು. ಈ ವೇಳೆ ಆತ್ಮಹತ್ಯೆಗೈದಿದ್ದಾರೆ ಎನ್ನಲಾಗಿದೆ.

ವಾದಿರಾಜ ಅವರನ್ನು ಬ್ಯಾಂಕ್‌ಗೆ ಕರೆದೊಯ್ಯಲು ಅವರ ಕಾರಿನ ಚಾಲಕ ಅಪಾರ್ಟ್‌ಮೆಂಟ್ ಕೆಳಗೆ ಕಾಯುತ್ತಿದ್ದರು. ತುಂಬಾ ಹೊತ್ತಾದರೂ ವಾದಿರಾಜ ಬಾರದ ಕಾರಣ ಚಾಲಕ ಅವರ ಮೊಬೈಲ್ ಕರೆ ಮಾಡಿದ್ದಾರೆ. ಆದರೆ ಯಾವುದೇ ಸ್ಪಂದನ ಸಿಗದ ಕಾರಣ ಫ್ಲ್ಯಾಟ್‌ಗೆ ತೆರಳಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಲರ್ಕ್ ಆಗಿ ಬ್ಯಾಂಕ್‌ಗೆ ಸೇರಿದ್ದ ವಾದಿರಾಜ ಸುಮಾರು 33 ವರ್ಷಗಳಲ್ಲಿ ಹಂತ ಹಂತವಾಗಿ ಬಡ್ತಿ ಪಡೆದು ಪ್ರಸ್ತುತ ಜನರಲ್ ಮೆನೇಜರ್ ಆಗಿದ್ದರು. ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೆಯವರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ. ಹೊಟ್ಟೆ ಮತ್ತು ಕುತ್ತಿಗೆಯಲ್ಲಿ ಕೊಯ್ದಿರುವ ಗಾಯವಿದೆ. ಸಿ.ಸಿ.ಕ್ಯಾಮಾರ ದೃಶ್ಯಗಳನ್ನು ಪರಿಶೀಲಿಸು ತ್ತಿದ್ದು, ತನಿಖೆಯ ಬಳಿ ಕೃತ್ಯಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News