ಮಂಗಳೂರು: ಎಎಸ್‌ಐ ಬ್ಯಾಂಕ್ ಖಾತೆಯಿಂದಲೂ ಹಣ ಲಪಟಾಯಿಸಿದ ಸೈಬರ್ ಕಳ್ಳರು !
ಮಂಗಳೂರು, ಅ.28: ನಗರದ ಉಪನೋಂದಣಿ ಕಚೇರಿಯಲ್ಲಿ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ನೀಡಿರುವ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಹಣ ಕದಿಯುವ ಪ್ರಕರಣ ಮುಂದುವರಿದಿದ್ದು, ಒಂದು ತಿಂಗಳು ಅಂತರದಲ್ಲಿ 8ಕ್ಕೂ ಅಧಿಕ ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.
ಪೊಲೀಸ್ ಎಎಸ್‌ಐ ಅವರ ಬ್ಯಾಂಕ್ ಖಾತೆಯಿಂದಲೂ ಹಣವನ್ನು ಸೈಬರ್ ವಂಚಕರು ಎಗರಿಸಿರುವುದು ಬೆಳಕಿಗೆ ಬಂದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಎಎಸ್‌ಐ ಆಲ್ಬರ್ಟ್ ಲಸ್ರಾದೋ ಹಣ ಕಳಕೊಂಡವರು. ವಂಚನೆಗೊಳ ಗಾದ ಅವರು ಸೈಬರ್ ಅಪರಾಧಗಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಲ್ಬರ್ಟ್ ಲಸ್ರಾದೋ ಅವರು ಆ.2ರಂದು ಮಂಗಳೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಾಗ ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಿದ್ದರು ಎನ್ನಲಾಗಿದೆ. ಅಪರಿಚಿತರು ಈ ತಂತ್ರಾಂಶ ವನ್ನು ಬಳಸಿಕೊಂಡು ಎಸ್‌ಬಿಐ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 36,890 ರೂಪಾಯಿ ಹಣ ಎಗರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಧಾರ್ ಸೋರಿಕೆ: ಮ್ಯಾಕ್ಸಿಂ ಎಂಬವರು ಸೊಸೈಟಿಯೊದರಲ್ಲಿ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನೀಡಿ ಹಣ ಕಳಕೊಂಡಿ ದ್ದಾರೆ. ಸಾಲ ವಿಚಾರದಲ್ಲಿ ಗುರುಪುರದ ಸಹಕಾರಿ ಸಂಘ ಒಂದಕ್ಕೆ ತೆರಳಿದ್ದ ಅವರು ಅಲ್ಲಿ ಆಧಾರ್ ಮತ್ತು ಬೆರಳಚ್ಚು ನೀಡಿದ್ದರು ಎಂದು ಹೇಳಲಾಗಿದೆ. ಅಕ್ಟೋಬರ್ ತಿಂಗಳಾರಂಭದಲ್ಲಿ ದಿನಕ್ಕೆ 5,000 ರೀತಿ ಮೂರು ದಿನ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಈ ಬಗ್ಗೆ ಬ್ಯಾಂಕಿನಲ್ಲಿ ಅವರು ವಿಚಾರಿಸಿದಾಗ, ಆಧಾರ್ ಕಾರ್ಡ್ ಸೋರಿಕೆಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮ್ಯಾಕ್ಸಿಂ ಕುಟಿನ್ಹೋ ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಮಹತ್ವದ ಸುಳಿವು ಲಭ್ಯ: ರಿಜಿಸ್ಟ್ರೇಷನ್ ಕಚೇರಿಯಲ್ಲಿ ಸೈಬರ್ ವಂಚನಾ ಜಾಲದ ಬಗ್ಗೆ ನಗರ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು, ಶೀಘ್ರದಲ್ಲೇ ಈ ಪ್ರಕರಣ ಬಯಲಿಗೆಳೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.