ಮಂಗಳೂರು: ಕೆಕೆಎಂಎಯಿಂದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಆರ್ಥಿಕ ನೆರವು

Update: 2023-07-30 17:09 GMT

ಮಂಗಳೂರು, ಜು.30: ಕುವೈತ್ ಕೇರಳ ಮುಸ್ಲಿಮ್ ಅಸೋಸಿಯೇಶನ್(ಕೆಕೆಎಂಎ) ಕರ್ನಾಟಕ ಶಾಖೆಯ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಆರ್ಥಿಕ ನೆರವು ಮತ್ತು ಮರ್ಹೂಮ್ ಎಸ್.ಎಂ.ಬಶೀರ್ ಜೀವಮಾನ ಸಾಧನೆ ಪ್ರಶಸ್ತಿ ಸಮಾರಂಭ ರವಿವಾರ ಫಳ್ನೀರ್‌ನ ಯುನಿಟಿ ಆಸ್ಪತ್ರೆಯ ಬಳಿ ಇರುವ ಎಹ್ಸಾನ್ ಮಸೀದಿಯ ಎಚ್‌ಐಎಫ್ ಆಡಿಟೋರಿಯಂನಲ್ಲಿ ನಡೆಯಿತು.

ಸಮಾರಂಭವನ್ನು ಕೆಕೆಎಂಎ ಮಾಜಿ ಅಧ್ಯಕ್ಷ ಮತ್ತು ಟ್ರಸ್ಟಿ ಎನ್.ಎ.ಮುನೀರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 2002ರಲ್ಲಿ ಕೇವಲ 7 ಸದಸ್ಯರೊಂದಿಗೆ ಕುವೈತ್‌ನಲ್ಲಿ ಆರಂಭಗೊಂಡ ʼಕೆಕೆಎಂಎʼ ಸದ್ಯ 16 ಸಾವಿರ ಸದಸ್ಯರನ್ನು ಒಳಗೊಂಡಿದೆ. ಈ ಪೈಕಿ ಸಣ್ಣ, ಪುಟ್ಟ ಕೆಲಸಗಳಿಂದ ಹಿಡಿದು ವಿವಿಧ ವರ್ಗಗಳ ಉದ್ಯೋಗಿಗಳು ಸಂಘಟನೆಯಲ್ಲಿದ್ದಾರೆ. ಸದಸ್ಯರ ದುಡಿಮೆಯ ಅಲ್ಪ ಮೊತ್ತಗಳನ್ನು ಒಟ್ಟು ಸೇರಿಸಿ ಸಂಘಟನೆಯ ಸದಸ್ಯರು ಮೃತಪಟ್ಟಾಗ ಅವರ ಕುಟುಂಬಕ್ಕೆ ಫ್ಯಾಮಿಲಿ ಬೆನಿಫಿಟ್ ಸ್ಕೀಂ ಮೂಲಕ ನೆರವು ನೀಡುವುದು ಕೆಕೆಎಂಎ ಮುಖ್ಯ ಧ್ಯೇಯವಾಗಿದೆ. ಇದುವರೆಗೆ 15 ಕೋಟಿ ರೂ.ವನ್ನು ಕೆಕೆಎಂಎ ಮೂಲಕ ಸಂಗ್ರಹಿಸಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಕೆಎಂಎ ಕರ್ನಾಟಕ ಶಾಖೆ ಅಧ್ಯಕ್ಷ ಯೂಸುಫ್ ರಶೀದ್, ಕೆಕೆಎಂಎ ಅನಿವಾಸಿ ಭಾರತೀಯರ ಶ್ರಮದ ಫಲವಾಗಿ ಬೆಳೆದು ಬಂದ ವಿಶೇಷ ಸಂಘಟನೆಯಾಗಿದೆ. ಈ ವರೆಗೆ 250 ಮಂದಿ ಸದಸ್ಯರು ಮೃತಪಟ್ಟಿದ್ದಾರೆ. ಈ ಪೈಕಿ 241 ಸದಸ್ಯರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಸಾಧ್ಯವಾಗಿದೆ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉದ್ದೇಶವನ್ನು ಸಂಘಟನೆ ಹೊಂದಿದೆ. ಕರ್ನಾಟಕ ಶಾಖೆಯ ಮಹತ್ವದ ಯೋಜನೆಯಾದ ‘ಕನಸಿನ ಮನೆ’ ಮೂಲಕ ಅರ್ಹ 14 ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಈ ಬಾರಿಯೂ ಎರಡು ಮನೆಗಳನ್ನು ನಿರ್ಮಿಸಿ ಅರ್ಹರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಕೆಎಂಎ ಕರ್ನಾಟಕ ರಾಜ್ಯಾಧ್ಯಕ್ಷ ಎಸ್.ಎಂ.ಫಾರೂಕ್ ದಿವಂಗತ ಎಸ್.ಎಂ.ಬಶೀರ್ ಸಂಘಟನೆಯ ಪ್ರೇರಕ ಶಕ್ತಿಯಾಗಿದ್ದರು. ಅವರು ಸಂಘಟನೆಗಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ ಎಂದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಂಡಿಯನ್ ಡಿಸೈನ್ ಸ್ಕೂಲ್‌ನ ಅಧ್ಯಕ್ಷ ಮತ್ತು ಆರ್ಕಿಟೆಕ್ಟ್ ಎ.ಆರ್.ಮುಹಮ್ಮದ್ ನಿಸಾರ್ ಮಾತನಾಡಿ, ಕೆಕೆಎಂಎನ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಮುಂದಿನ ವರ್ಷ ತಮ್ಮ ಸಂಸ್ಥೆಯ ವತಿಯಿಂದ ಒಂದು ವಿದ್ಯಾರ್ಥಿಗೆ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಹಸನ್ ಯೂಸುಫ್‌ರಿಗೆ ಮರ್ಹೂಮ್ ಎಸ್.ಎಂ.ಬಶೀರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭ ಸಂಘಟನೆಗಾಗಿ ನೀಡಿದ ಕೊಡುಗೆಗಾಗಿ ಕೆಕೆಎಂಎ ಕರ್ನಾಟಕ ರಾಜ್ಯಾಧ್ಯಕ್ಷರ ಎಸ್.ಎಂ.ಫಾರೂಕ್‌ರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಸಂಘಟನೆಯ ಸದಸ್ಯರ 9 ಕುಟುಂಬಗಳಿಗೆ ಫ್ಯಾಮಿಲಿ ಬೆನಿಫಿಟ್ ಸ್ಕೀಮ್ ಮೂಲಕ ನೆರವು ನೀಡಲಾಯಿತು. ಕಳೆದ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ 16 ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಅವಾರ್ಡ್ ವಿತರಿಸಲಾಯಿತು. 10 ಮಂದಿ ಡಯಾಲಿಸಿಸ್‌ಗೆ ರೋಗಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಐವರು ವಿದ್ಯಾರ್ಥಿಗಳಿಗೆ ಮರ್ಹೂಮ್ ಎಸ್.ಎಂ.ಬಶೀರ್ ಸ್ಮಾರಕ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಎಸ್.ಎಂ. ಗ್ರೂಪ್ ಆಫ್ ಕಂಪೆನೀಸ್‌ನ ಅಧ್ಯಕ್ಷ ಎಸ್.ಎಂ.ಬಾಷಾ, ಎಚ್‌ಐಎಫ್ ಮಂಗಳೂರು ಇದರ ಅಧ್ಯಕ್ಷ ಎ.ಕೆ.ನಾಝಿಮ್, ಕೆಕೆಎಂಎ ಪದಾಧಿಕಾರಿಗಳಾದ ಮುಹಮ್ಮದ್ ಅಮೀನ್, ಮುನೀರ್ ಕೋಡಿ ಉಪಸ್ಥಿತರಿದ್ದರು.

ಹಾಫಿಝ್ ಆದಂ ಹಾಯಿಲ್ ಫಾರೂಕ್ ಕಿರಾಅತ್ ಪಠಿಸಿದರು. ಕೆಕೆಎಂಎ ಸದಸ್ಯರಾದ ಮುಹಮ್ಮದ್ ಅಮೀನ್ ಸುಹೈಲ್ ಸ್ವಾಗತಿಸಿದರು. ಅಬ್ದುಲ್ಲತೀಫ್ ವಂದಿಸಿದರು. ಉಝೈಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.































Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News