ಮಂಗಳೂರು: ಸ್ಮಾರ್ಟ್ ಸಿಟಿ 2.1 ಕಿ.ಮೀ. ಜಲಾಭಿಮುಖ ಯೋಜನೆಗೆ 70 ಕೋಟಿ ರೂ.!

Update: 2023-11-24 14:14 GMT

ಮಂಗಳೂರು: ಸ್ಮಾರ್ಟ್ ಸಿಟಿಯ ಜಲಾಭಿಮುಖ ಯೋಜನೆ (ವಾಟರ್‌ಫ್ರಂಟ್)ಯಡಿ ನೇತ್ರಾವತಿ ನದಿ ತೀರದಲ್ಲಿ ಕೈಗೆತ್ತಿಕೊಳ್ಳಲಾಗಿರುವ 2.1 ಕಿ.ಮೀ. ಉದ್ದದ ಕಾಮಗಾರಿಗೆ 70 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ನಗರಾಭಿವೃದ್ಧಿ ಸಚಿವ ಬಿ. ಸುರೇಶ್ ಬೈರತಿ, ಯೋಜನೆ ಪ್ರಸ್ತಾವನೆಯ ಸಮಗ್ರ ಮರು ಪರಿಶೀಲನೆ ಯವರೆಗೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಶುಕ್ರವಾರ ಸ್ಮಾರ್ಟ್‌ಸಿಟಿ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳ ಪರಿಶೀಲನೆಯನ್ನು ನಡೆಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ವಾಟರ್ ಫ್ರಂಟ್ ಯೋಜನೆ ವಿಳಂಬವಾಗಿರುವ ಬಗ್ಗೆ ಸಚಿವರು ಪ್ರಶ್ನಿಸಿದಾಗ ಜಾಗದ ಸಮಸ್ಯೆಯಿಂದಾಗಿ ತಡವಾಗಿದೆ. ಯೋಜನೆಯಡಿ ನದಿಯ ಕಿನಾರೆಯಲ್ಲಿ ತಡೆಗೋಡೆ, ವಾಕಿಂಗ್ ಟ್ರ್ಯಾಕ್, ಯೋಗ ಸೆಂಟರ್, ಕಿಯಾಸ್ಕ್‌ಗಳನ್ನು ರಚಿಸಲಾಗುತ್ತದೆ. ಶೇ. 10ರಷ್ಟು ಕಾಮಗಾರಿ ಆಗಿದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿ ಅರುಣ್ ಪ್ರಭಾ ಅವರು ವಿವರ ನೀಡಿದರು.

2.1 ಕಿ.ಮೀ. ಉದ್ದದಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಯೋಜನೆಗೆ ಇಷ್ಟೊಂದು ದುಡ್ಡು ಯಾಕೆ? ಅಂತಹ ಚಮತ್ಕಾರ ಅಲ್ಲಿ ಏನು ಮಾಡುತ್ತೀರಿ ನೋಡಬೇಕು. ಯೋಜನೆಯ ಪ್ರಸ್ತಾವನೆಯ ಕಡತವನ್ನು ಬೆಂಗಳೂರಿಗೆ ತಂದು ತೋರಿಸಿ, ಅಲ್ಲಿ ಅಗತ್ಯ ಕಾಮಗಾರಿಗಳನ್ನು ಮರು ಪರಿಶೀಲನೆ ನಡೆಸಿ ಮುಂದುವರಿಸಲಾಗುವುದು ಎಂದು ಸಚಿವರು ಸೂಚಿಸಿದರು.

ಸುಲ್ತಾನ್ ಬತ್ತೇರಿ ಹ್ಯಾಂಗಿಂಗ್ ಅಲ್ಲ ರಸ್ತೆ ಸೇತುವೆಯೇ ಆಗಲಿ

ಸುಲ್ತಾನ್ ಬತ್ತೇರಿಯಿಂದ ಬೆಂಗರೆಗೆ ಹ್ಯಾಗಿಂಗ್ ಬ್ರಿಡ್ಜ್ ಮಾಡಲು ಉದ್ದೇಶಿಸಲಾಗಿತ್ತು. ನಂತರ ಸ್ಥಳೀಯ ಮೀನುಗಾರರ ಬೇಡಿಕೆಯ ಮೇರೆಗೆ 49 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ಸೇತುವೆ ಮಾಡಲು ಚಿಂತಿಸಲಾಗಿದೆ ಎಂದು ಅಧಿಕಾರಿ ಸಭೆಯಲ್ಲಿ ತಿಳಿಸಿದರು.

ಸ್ಥಳೀಯರಿಗೆ ಪೂರಕವಾಗುವಂತೆ ವಾಹನ ಸಂಚಾರಕ್ಕೆ ಪೂರಕವಾದ ರಸ್ತೆ ಸೇತುವೆಯನ್ನೇ ನಿರ್ಮಿಸಿ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವ ಸುರೇಶ್ ಬೈರತಿ ನಿರ್ದೇಶನ ನೀಡಿದರು.

ನಾಯರ್ ಕುದ್ರು ಐಲ್ಯಾಂಡ್ ಯೋಜನೆ ಪ್ರಸ್ತಾವನೆ ಬದಲಾವಣೆಗೆ ಸೂಚನೆ

ನಾಯರ್‌ ಕುದ್ರು ದ್ವೀಪ ಅಭಿವೃದ್ಧಿಗೆ ಸಂಬಂಧಿಸಿ 49 ಕೋಟಿರೂ. ವೆಚ್ಚದ ಯೋಜನೆ ರೂಪಿಸಲಾಗಿದ್ದು, ಓಪನ್ ಏರ್ ಥಿಯೇಟರ್, ವಾಟರ್‌ ಸ್ಪೋರ್ಟ್ಸ್ ಯೋಜನೆಗಳನ್ನು ಒಳಗೊಂಡಿದೆ. ಆದರೆ ಸಿಆರ್‌ಝೆಡ್ ಅನುಮತಿ ದೊರಕಿಲ್ಲ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿ ಮಾಹಿತಿ ನೀಡಿದರು.

ಹೀಗೆ ಮಾಡಿದರೆ ಈ ಜನ್ಮದಲ್ಲಿ ಈ ಯೋಜನೆ ಪೂರ್ಣಗೊಳ್ಳದು. ಕೇಂದ್ರ ಅಥವಾ ರಾಜ್ಯದಿಂದ ಸಿಆರ್‌ಝೆಡ್ ಅನುಮತಿ ದೊರಕುವುದಿಲ್ಲ. ಹಾಗಾಗಿ ಪ್ರಸ್ತಾವನೆ ಬದಲಾವಣೆ ಮಾಡಿ ಕಳುಹಿಸಿ ಎಂದು ಸಚಿವ ಸುರೇಶ್ ಬೈರತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಗ್ರ ಅಭಿವೃದ್ಧಿ ಯೋಜನೆ ಯಾಕಾಗಿಲ್ಲ?

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಪ್ರಗತಿ ಪರಿಶೀಲನೆಯ ಸಂದರ್ಭ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಬಗ್ಗೆ ಪ್ರಸ್ತಾಪಿಸಿದ ಸಚಿವ ಸುರೇಶ್ ಬೈರತಿ, 2009ರ ಬಳಿಕ 10 ವರ್ಷದಲ್ಲಿ ಮತ್ತೆ ಸಿಡಿಪಿ ಯೋಜನೆ ಆಗಬೇಕಾ ಗಿತ್ತು. 2019ರಲ್ಲಿ ಈ ಯೋಜನೆ ಕೈಗೊಳ್ಳಬೇಕಾಗಿತ್ತು. ಐದು ವರ್ಷವಾದರೂ ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರು.

ಶೇ. 75ರಷ್ಟು ಪೂರ್ಣಗೊಂಡಿದೆ. ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಮುಡಾ ಆಯುಕ್ತ ಮನ್ಸೂರ್ ಅಲಿ ಅವರು ತಿಳಿಸಿದಾಗ, ಐದು ವರ್ಷದಲ್ಲಿ ಶೇ. 75ರಷ್ಟು ಆಗಿದ್ದು, ಇನ್ನು ಮೂರು ತಿಂಗಳಲ್ಲಿ ಮುಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮುಗಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಖಾತರಿ ವ್ಯಕ್ತಪಡಿಸಿದಾಗ, ಮುಗಿಸಿಲ್ಲ ಎಂದರೆ ಶಿಸ್ತು ಕ್ರಮ ವಹಿಸುವುದಾಗಿ ಸಚಿವರು ಎಚ್ಚರಿಸಿದರು.

ಉರ್ವಾ ಮಾರುಕಟ್ಟೆ ಕಾರ್ಯಾರಂಭಕ್ಕೆ ಸೂಚನೆ

ಉರ್ವಾ ಮಾರುಕಟ್ಟೆ 20 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಿ ಹಲವು ವರ್ಷಗಳೇ ಆದರೂ ಇನ್ನೂ ವ್ಯಾಪಾರಿ ಗಳಿಗೆ ಯಾಕೆ ಅವಕಾಶವಾಗಿಲ್ಲ ಎಂದು ಸಚಿವರು ಪ್ರಶ್ನಿಸಿದಾಗ, ಪಾಲಿಕೆ ಆಯುಕ್ತ ಆನಂದ್ ಅವರು ಪ್ರತಿಕ್ರಿಯಿಸಿ, ಅಲ್ಲಿ ಗಾಳಿಯ ವ್ಯವಸ್ಥೆ ಇಲ್ಲ. ಹಾಗಾಗಿ ವ್ಯಾಪಾರಿಗಳು ಬರಲು ಕೇಳುತ್ತಿಲ್ಲ. ಮತ್ತೆ ರಿನೋವೇಟ್ ಮಾಡಲು 4 ಕೋಟಿ ಅಗತ್ಯವಿದೆ ಎಂದಾಗ ಪ್ರಸ್ತಾವನೆ ಕಳುಹಿಸಿ, ಶೀಘ್ರದಲ್ಲೇ ಸರಿ ಪಡಿಸಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಸಚಿವರು ಸೂಚಿಸಿದರು.

ಯುಜಿಡಿ ಮಿಸ್ಸಿಂಗ್ ಲಿಂಕ್ಸ್ ಶೀಘ್ರ ಸರಿಪಡಿಸಿ

ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಗಳ ಮಿಸ್ಸಿಂಗ್ ಲಿಂಕ್ ಸರಿಪಡಿಸಲು 40 ಕೋಟಿ ರೂ.ಗಳನ್ನು ಗುರುವಾರ ಸಂಪುಟದಿಂದ ಒಪ್ಪಿಗೆ ಪಡೆದು ಒದಗಿಸಲಾಗಿದೆ. ಶೀಘ್ರವೇ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸರಕಾರಿ ಜಾಗ, ರಾಜಕಾಲುವೆ ಒತ್ತುವರಿ ತೆರವಿಗೆ ‘ಸ್ಪೆಷಲ್ ಡ್ರೈವ್’ಗೆ ಸೂಚನೆ

ನಗರದಲ್ಲಿ ಹಲವು ರಾಜಕಾಲುವೆಗಳು, ಸರಕಾರಿ ಜಮೀನು ಒತ್ತುವರಿಯಾಗಿದೆ ಎಂದು ಮನಪಾ ಸದಸ್ಯ ವಿನಯರಾಜ್ ಸಚಿವರ ಗಮನ ಸೆಳೆದರು.

ಇದು ಗಂಭೀರ ವಿಚಾರ. ಸರಕಾರಿ ಜಮೀನು ಅಥವಾ ರಾಜಕಾಲುವೆ ಒತ್ತುವರಿ ಅಪರಾಧವಾಗಿದ್ದು, ಒತ್ತುವರಿ ಆಗಿದ್ದ ಪ್ರಕರಣಗಳಲ್ಲಿ ತಕ್ಷಣ ತೆರವುಗೊಳಿಸಲು ಸ್ಪೆಷಲ್ ಡ್ರೈವ್ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ಸಚಿವ ಸುರೇಶ ಬೈರತಿ ನಿರ್ದೇಶನ ನೀಡಿದರು.

ಮಹಾತ್ಮಾಗಾಂಧಿ ನಗರೋತ್ಥಾನ ಯೋಜನೆಯಡಿ ಈಗಾಗಲೇ ಆರಂಭಿಸಲಾದ ಕಾಮಗಾರಿ ಬಹುತೇಕ ಅರ್ಧದಲ್ಲಿರು ವಾಗಲೇ 125 ಕೋ.ರೂ ಅನುದಾನಕ್ಕೆ ತಡೆ ನೀಡಲಾಗಿದೆ. ಇದರಿಂದ ಕಾಮಗಾರಿ ನಡೆಸಲು ಸಮಸ್ಯೆ ಆಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಸಚಿವ ಬೈರತಿ ಸುರೇಶ್ ಅವರು ಮಾತನಾಡಿ ‘ಕಾಮಗಾರಿ ಆರಂಭವಾಗಿರುವುದನ್ನು ಹಾಗೂ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದ ಯೋಜನೆಗೆ ಅನುದಾನ ತಡೆ ನೀಡಿಲ್ಲ. ಆದರೆ, ಬಾಯಿ ಮಾತಿನಲ್ಲೇ ಘೋಷಣೆ ಮಾಡಿ, ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯದ ಯೋಜನೆಗೆ ಅನುಮೋದನೆ ನೀಡುವುದಿಲ್ಲ’ ಎಂದರು. ಶಾಸಕರು ಮಾತನಾಡಿ, 125 ಕೋ.ರೂ.ಗಳ ಎಲ್ಲಾ ಯೋಜನೆಗಳು 2019-20ರಲ್ಲಿಯೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದಿದೆ ಎಂದರು. ಸಚಿವರು ಮಾತನಾಡಿ ‘ಹಾಗಾದರೆ 4 ವರ್ಷದಿಂದ ಯಾಕೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಮರುಪ್ರಶ್ನಿಸಿ, ಆರ್ಥಿಕ ಇಲಾಖೆಯಿಂದ ಅನುಮೋದನೆ ಆಗಿದ್ದರೆ ಅದಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ಮಂಗಳೂರು ನಗರಕ್ಕೂ ಬೃಹತ್ ಸ್ವಚ್ಛತಾ ಯಂತ್ರ

ಮಂಗಳೂರು ನಗರ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಖರೀದಿಸಲಾದ ವಾಹನಗಳು ಎರಡು ತಿಂಗಳಾದರೂ ಉಪಯೋ ಗಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸುರೇಶ ಬೈರತಿ, 3-4 ತಿಂಗಳಿನಿಂದ ವಾಹನಗಳನ್ನು ನಿಂತಲ್ಲೇ ನಿಲ್ಲಿಸಿದರೆ ವಾಹನಗಳು ಕಾರ್ಯನಿರ್ವಹಿಸುವುದಿಲ್ಲ ಎಂದಾಗ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಕೇಂದ್ರ-ರಾಜ್ಯ ಸರಕಾರದ ಸೂಚನೆ ಪ್ರಕಾರ ತ್ಯಾಜ್ಯ ನಿರ್ವಹಣೆಗೆ ವಾಹನಗಳನ್ನು ಪಾಲಿಕೆಯೇ ಖರೀದಿಸಿದೆ. ಬಳಿಕದ ನಿರ್ವಹಣೆ ಏಕ ಟೆಂಡರ್ ಕ್ರಮವನ್ನು ರದ್ದುಪಡಿಸಲಾಗಿದೆ. ಬದಲಾಗಿ ಪಾಲಿಕೆಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ವಾರದೊಳಗೆ ಜಿಲ್ಲಾಧಿಕಾರಿಯವರ ಅನುಮೋದನೆಯೊಂದಿಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು. ಸಚಿವರು ಮಾತನಾಡಿ, ಸ್ವಚ್ಚತೆಯ ಹಿನ್ನೆಲೆಯಲ್ಲಿ ಹಾಸನ, ಮೈಸೂರು ಸೇರಿದಂತೆ, ಮಂಗಳೂರು ನಗರಕ್ಕೂ ಅಗತ್ಯವಿದ್ದಲ್ಲಿ ಬೃಹತ್ ಸ್ವಚ್ಚತಾ ಯಂತ್ರವನ್ನು ನೀಡಲಾಗುವುದು ಎಂದರು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News