ಮಂಗಳೂರು: ಅಂಕೆ ಮೀರುತ್ತಿದೆ ಅನೈತಿಕ ಪೊಲೀಸ್‌ಗಿರಿ; ಪತ್ರಕರ್ತನಿಗೂ ಅವಾಚ್ಯ ಶಬ್ಧಗಳ ನಿಂದನೆ, ಬೆದರಿಕೆ

Update: 2023-07-31 13:03 GMT

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಅನೈತಿಕ ಪೊಲೀಸ್‌ಗಿರಿ ಅಂಕೆ ಮೀರಿ ಬೆಳೆಯುತ್ತಿದ್ದು, ವಿಟ್ಲದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಅಡ್ಡಗಟ್ಟಿ ನಿಂದಿಸಿದ ಪ್ರಕರಣದ ಸಂದರ್ಭದಲ್ಲೇ ನಗರದ ಯುವ ವರದಿಗಾರನನ್ನು ತಡೆದು ಧರ್ಮದ ಹೆಸರೆತ್ತಿ ಅವಾಚ್ಯವಾಗಿ ನಿಂದಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಗರದ ವೆಬ್‌ಸೈಟ್ ಒಂದರ ಯುವ ವರದಿಗಾರ ಅಭಿಜಿತ್ ಅವರು, ಜು. 26ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಾವೂರು ಜಂಕ್ಷನ್ ಬಳಿಯ ಹೊಟೇಲೊಂದರಲ್ಲಿ ತನ್ನ ಕಾಲೇಜಿನ ಸಹಪಾಠಿಯಾಗಿದ್ದ ಯುವತಿ ಜತೆ ಊಟ ಮುಗಿಸಿ ಹೊರ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ‘ನೀನು ಬ್ಯಾರಿಯೊಂದಿಗೆ ಏನು ಮಾತನಾಡುತ್ತಿ. ನೀನು ಬ್ಯಾರಿಯ ಇಲ್ಲಿಂದ ಹೊರಡು’ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಈ ಸಂದರ್ಭ ಅಭಿಜಿತ್ ಅವರು ತಾನು ದೈಜಿವರ್ಲ್ಡ್ ವರದಿಗಾರ ಎಂದು ತನ್ನ ಐಡಿ ಕಾರ್ಡ್ ತೋರಿಸಿದರೂ ಮತ್ತೆ ಅವಾಚ್ಯ ಶಬ್ಧಗಳಿಂದ ಆ ಅಪರಿಚಿತ ವ್ಯಕ್ತಿ ನಿಂದಿಸಿದ್ದ.

ಈ ಬಗ್ಗೆ ಅಭಿಜಿತ್ ಅದೇ ದಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆ ಸಂದರ್ಭದಲ್ಲಿ ಆ ವ್ಯಕ್ತಿಯ ಕಾರಿನ ನಂಬರ್ ನೋಟ್ ಮಾಡಿದ್ದರು. ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಅವರ ನಿರ್ದೇಶನದ ಮೇರೆಗೆ ಆರೋಪಿ ಚೇತನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಗೊಳಪಡಿಸಿದ್ದಾರೆ. ಜು. 28ರಂದು ಎಫ್‌ಐಆರ್ ದಾಖಲಾಗಿದ್ದು, ಬಳಿಕ ಪ್ರಕರಣದ ಆರೋಪಿ, ಕೋಟೆಕಾರ್ ನಿವಾಸಿ ಚೇತನ್ ಎಂಬಾತನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

"ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಅಭಿಜಿತ್, ‘ನನ್ನ ಸ್ನೇಹಿತೆಯ ಜತೆ ಮಧ್ಯಾಹ್ನ ಊಟ ಮುಗಿಸಿ ಹೊಟೇಲ್‌ನಿಂದ ಹೊರ ಬರುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ನಮ್ಮ ಬಳಿ ಬಂದಿದ್ದಾರೆ. ಅವರಲ್ಲಿ ಒಬ್ಬಾತ ಅವಾಚ್ಯ ಶಬ್ಧಗಳನ್ನು ಉಪಯೋಗಿಸಿ ನಿಂದಿಸಿದ್ದಾನೆ. ನಾನು ವರದಿಗಾರ ಎಂದು ಹೇಳಿ ಐಡಿ ತೋರಿಸಿದರೂ ಸಮಾಧಾನಗೊಳ್ಳದೆ ನಿಂದನೆ ಮುಂದುವರಿಸಿದ್ದಾನೆ. ಅವರ ಕಾರಿನ ನಂಬರ್ ನೋಟ್ ಮಾಡಿದ್ದು, ಪ್ರಕರಣ ದಾಖಲಿಸಿದ್ದೇನೆ. ಠಾಣಾ ಪೊಲೀಸರು, ಎಸಿಪಿ ಸೇರಿದಂತೆ ಪೊಲೀಸ್ ಕಮಿಷನರ್ ಕೂಡಾ ಪ್ರಕರಣದಲ್ಲಿ ಸಹಕಾರ ನೀಡಿದ್ದಾರೆ" ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News