ಜ.12ರಿಂದ 19ರ ವರೆಗೆ ಅಳೇಕಲ ಉರೂಸ್
ಉಳ್ಳಾಲ: ಅಳೇಕಲ ಜುಮಾ ಮಸೀದಿಯ ಪಾರ್ಶ್ವದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಹಝ್ರತ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ(ಖ.)ಅವರ ಹೆಸರಿನಲ್ಲಿ 2 ವರ್ಷಗಳಿಗೊಮ್ಮೆ ಆಚರಿಸುವ ಉರೂಸ್ ಸಮಾರಂಭವು ಈ ಬಾರಿ ಜ.12ರಿಂದ 19ರವರೆಗೆ ಅಳೇಕಲದ ಎಸ್.ಎಂ. ತಂಙಳ್ ವೇದಿಕೆಯಲ್ಲಿ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಯು.ಎಸ್.ಹಂಝ ಹಾಜಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜ.12ರಂದು ಉರೂಸ್ ಉದ್ಘಾಟನೆಗೊಳ್ಳಲಿದ್ದು, ಅಳೇಕಲ ಮಸೀದಿಯ ಖತೀಬ್ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷ ಹಂಝ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಸ್ತಫಾ ಸಖಾಫಿ ತೆನ್ನಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸೈಯದ್ ಜಲಾಲುದ್ದೀನ್ ತಂಙಳ್ ಅಳೇಕಲ ದುಆ ನೆರವೇರಿಸಲಿದ್ದಾರೆ ಎಂದರು.
ಜ.13ರಂದು ಅಬ್ದುಲ್ ಸಮದ್ ಅಮಾನಿ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಜರುಗಲಿದೆ. ಎಂಟು ದಿನಗಳ ಕಾಲ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಜ.18ರಂದು ಸಂಜೆ 7ಕ್ಕೆ ಸಂದಲ್ ಮೆರವಣಿಗೆ, ರಾತ್ರಿ ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ಸ್ಪೀಕರ್ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ದಿ ನ್ಯಾಶನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಯು.ಟಿ.ಇಫ್ತಿಕಾರ್ ಅಲಿ, ಇನ್ ಸ್ಪೆಕ್ಟರ್ ಬಾಲಕೃಷ್ಣ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಜ.19ರಂದು ರಾತ್ರಿ ಮುಹಿಯುದ್ದೀನ್ ರಾತೀಬ್ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಉಪಾಧ್ಯಕ್ಷ, ಉಮರ್ ಫಾರೂಕ್ ಹಾಜಿ, ಕೋಶಾಧಿಕಾರಿ ಸಿ.ಎಂ.ಇಬ್ರಾಹೀಂ, ಉರೂಸ್ ಕನ್ವೀನರ್ ಅಶ್ರಫ್ ಸುಳ್ಯ, ಕಾರ್ಯದರ್ಶಿ ಅನ್ಸಾರ್ ಅಳೇಕಲ, ಸಂಚಾಲಕ ಆಸಿಫ್ ಅಬೂಬಕರ್ ಉಪಸ್ಥಿತರಿದ್ದರು.