ಪುತ್ತೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅರ್ಚಕರಿಗೆ ಮಸೀದಿಯಲ್ಲಿ ಉಪಚಾರ
ಪುತ್ತೂರು: ಬೈಕ್ ಸ್ಕಿಡ್ ಆಗಿ ಉರುಳಿಬಿದ್ದ ಪರಿಣಾಮ ಗಾಯಗೊಂಡಿದ್ದ ದೇವಸ್ಥಾನದ ಅರ್ಚಕರೊಬ್ಬರನ್ನು ಮಸೀದಿಯಲ್ಲಿದ್ದವರು ಮೇಲೆತ್ತಿ ಮಸೀದಿಗೆ ಕರೆದೊಯ್ದು ಉಪಚರಿಸಿದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿರುವುದು ವರದಿಯಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಮುಂಡ್ಯ ಎಂಬಲ್ಲಿರುವ ಶಾಸ್ತಾರ ದೇವಸ್ಥಾನದ ಅರ್ಚಕ ರಘುರಾಮ ಭಟ್ ಗಾಯಗೊಂಡವರಾಗಿದ್ದಾರೆ. ರಘುರಾಮ ಭಟ್ ಗುರುವಾರ ಸಂಜೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಉರುಳಿಬಿದ್ದಿದ್ದಾರೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಅವರು ಗಾಯಗೊಂಡಿದ್ದರು. ಇದನ್ನು ಗಮನಿಸಿದ ಮಸೀದಿಯಲ್ಲಿದ್ದವರು ರಘುರಾಮ ಭಟ್ ರನ್ನು ಮಸೀದಿಗೆ ಕರೆತಂದು ಉಪಚರಿಸಿದ್ದಾರೆ. ಅಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಅವರ ಕಾಲಿಗೆ ಆಗಿರುವ ಗಾಯದಿಂದ ರಕ್ತ ಒಸರುತ್ತಿತ್ತು. ಈ ಹಿನ್ನೆಲೆಯಲ್ಲಿ ಆಟೊ ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ಎಂಬವರು ತನ್ನ ರಿಕ್ಷಾದಲ್ಲಿ ಕುಂಬ್ರದ ಕ್ಲಿನಿಕ್ ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಚಿಕಿತ್ಸೆ ಪಡೆದ ಬಳಿಕ ಮಸೀದಿಗೆ ಮರಳಿದ ಅರ್ಚಕರು ರಕ್ತಸ್ರಾವ ಉಂಟಾಗಿದ್ದರಿಂದ ನಿತ್ರಾಣಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 2 ಗಂಟೆ ಮಸೀದಿಯಲ್ಲೇ ವಿಶ್ರಾಂತಿ ಪಡೆದರು. ಬಳಿಕ ಮಾಹಿತಿ ಪಡೆದ ಪರಿಚಯಸ್ಥರೊಬ್ಬರು ರಘುರಾಮ ಭಟ್ ಅವರನ್ನು ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋದರು ಎಂದು ತಿಳಿದುಬಂದಿದೆ.