ಉಪ್ಪಿನಂಗಡಿ: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Update: 2025-01-09 17:47 GMT

ಉಪ್ಪಿನಂಗಡಿ: ಕಳೆದ ಸೋಮವಾರ ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಹಿಳೆಯೋರ್ವರ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣದ ಬಾಕ್ಸ್ ಅನ್ನು ಎಗರಿಸಿದ್ದ ಪ್ರಕರಣವನ್ನು ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಬಂಟ್ವಾಳ ತಾಲೂಕು ಕೊಮಿನಡ್ಕ ನಿವಾಸಿ ನಸೀಮಾ (31) ಎಂಬಾಕೆಯನ್ನು ಬಂಧಿಸಿ ಆಕೆಯಿಂದ ಕಳವಿಗೀಡಾದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಕಡಬ ತಾಲೂಕು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ಮನೆ ನಿವಾಸಿ ಮುಸ್ತಾಫ ಎಂಬವರ ಪತ್ನಿ ಅಬೀಬಾ ಎಂಬವರು ಜ.6ರಂದು ಪೆರ್ನೆಯಲ್ಲಿರುವ ಹಾಲ್‍ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೊರಡುವ ಸಮಯ ಭದ್ರತೆಯ ದೃಷ್ಠಿಯಿಂದ ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್ -1 ಮತ್ತು ಸುಮಾರು 106 ಗ್ರಾಂ ತೂಕದ ಚಿನ್ನಾಭರಣವನ್ನು ಒಂದು ಬಾಕ್ಸ್ ನೊಳಗಡೆ ಹಾಕಿ ವ್ಯಾನಿಟಿ ಬ್ಯಾಗಿನೊಳಗಡೆ ಇಟ್ಟುಕೊಂಡು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ಮನೆಗೆ ಹೋಗಲು ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಡಬಕ್ಕೆ ಹೋಗಲು ಮಧ್ಯಾಹ್ನ ಗಂಟೆ 1.45 ರ ಸುಮಾರಿಗೆ ಕಡಬಕ್ಕೆ ಹೋಗುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿ, ಬ್ಯಾಗ್‍ನಿಂದ ಐಡಿ ಕಾರ್ಡ್ ತೆಗೆಯಲೆಂದು ನೋಡಿದಾಗ ವ್ಯಾನಿಟಿ ಬ್ಯಾಗಿನ ಜಿಪ್ ತೆರೆದಿರುವುದು ಕಂಡು ಬಂದಿತ್ತು. ಈ ಸಂದರ್ಭ ಪರಿಶೀಲಿಸಿದಾಗ ಅದರೊಳಗಡೆ ಚಿನ್ನ ಇಟ್ಟಿದ್ದ ಬಾಕ್ಸ್ ಕಳವಿಗೀಡಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸಂಕೀರ್ಣವಾಗಿದ್ದ ಪ್ರಕರಣದಲ್ಲಿ ಮಹತ್ವದ ಸುಳಿವನ್ನು ಸಂಪಾದಿಸಿಕೊಂಡು ಬೆನ್ನಟ್ಟಿದಾಗ ಬ್ಯಾಗ್ ಕಳ್ಳತನವನ್ನೇ ಕಸುಬಾಗಿಸಿಕೊಂಡ ನಸೀಮಾ ಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿ ಸಿದಾಗ ಕಳ್ಳತನದ ಕೃತ್ಯವನ್ನು ಒಪ್ಪಿಕೊಂಡು ತನ್ನ ಸ್ಕೂಟಿಯಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News