ಮಂಗಳೂರು: ಆಕಸ್ಮಿಕ ಗುಂಡು ಹಾರಾಟ ಪ್ರಕರಣ; ಆರೋಪಿ ಸೆರೆ
ಮಂಗಳೂರು: ನಗರ ಹೊರವಲಯದ ವಾಮಂಜೂರಿನ ಸೆಕೆಂಡ್ ಸೇಲ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಗುಂಡು ಹಾರಾಟ ನಡೆದು ಸಫ್ವಾನ್ ಎಂಬವರು ಗಾಯಗೊಂಡ ಪ್ರಕರಣದ ಆರೋಪಿ ಬದ್ರುದ್ದೀನ್ ಯಾನೆ ಅದ್ದು (35) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಆರಂಭದಲ್ಲಿ ‘ಸಫ್ವಾನ್ ಗನ್ ಪರಿಶೀಲನೆ ನಡೆಸುವಾಗ ಫೈರಿಂಗ್ ಆಗಿ ಗಾಯಗೊಂಡಿರುವುದು’ ಎಂದು ಹೇಳಲಾಗಿತ್ತು. ಆದರೆ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ತನಿಖೆ ನಡೆಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬಿದ್ದಿದೆ ಎಂದರು.
ವಿಚಾರಣೆ ವೇಳೆ ಗನ್ ಬಜಪೆಯ ವ್ಯಕ್ತಿಯೊಬ್ಬರದ್ದು ಎಂದು ಹೇಳುವ ಮೂಲಕ ಮತ್ತೊಮ್ಮೆ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಫ್ವಾನ್ ಹೇಳಿಕೆಯಲ್ಲಿ ಗೊಂದಲವಿದ್ದ ಕಾರಣ ಬದ್ರುದ್ದೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆವಾಗ ಸತ್ಯಾಂಶ ಬಹಿರಂಗವಾಗಿದೆ.
ಘಟನೆ ನಡೆದ ಒಂದು ದಿನದ ಹಿಂದೆ ಪರವಾನಗಿಯಿಲ್ಲದ ಅಕ್ರಮ ಗನ್‌ನ್ನು ಇಮ್ರಾನ್ ಎಂಬಾತ ಬದ್ರುದ್ದೀನ್‌ಗೆ ನೀಡಿದ್ದ. ಕೇರಳದ ವ್ಯಕ್ತಿಯೊಬ್ಬನಿಂದ ಇಮ್ರಾನ್ ಗನ್ ಖರೀದಿಸಿದ್ದ ಎನ್ನಲಾಗಿದೆ. ಸಫ್ವಾನ್ ಯಾಕೆ ಸುಳ್ಳು ಮಾಹಿತಿ ನೀಡಿದ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಘಟನೆ ವೇಳೆ ಅಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.