ಮಂಗಳೂರು: ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

Update: 2024-01-31 16:10 GMT

ಮಂಗಳೂರು: ನಗರದ ಮೆಸ್ಕಾಂ ಇಂಜಿನಿಯರ್‌ರ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 1 ಕೋಟಿಗೂ ಅಧಿಕ ಬ್ಯಾಂಕ್ ಬ್ಯಾಲೆನ್ಸ್ ಸಹಿತ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಮಂಗಳೂರಿನ ಅತ್ತಾವರ ವಿಭಾಗದ ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಾಂತಕುಮಾರ್‌ರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಶಾಂತಕುಮಾರ್‌ರ ಬೆಂಗಳೂರಿನ ನಿವಾಸದ ಮೇಲೂ ದಾಳಿಯಾಗಿವೆ ಎಂದು ತಿಳಿದು ಬಂದಿದೆ.

ತುಮಕೂರು ಮೂಲದ ಶಾಂತಕುಮಾರ್ ಎಚ್.ಎಂ. ಕಳೆದ 5 ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿ ದ್ದಾರೆ. 1994ರಲ್ಲಿ ಇಲಾಖೆ ಸೇರಿದ್ದ ಶಾಂತಕುಮಾರ್ ಬೆಂಗಳೂರು, ತುಮಕೂರು ಮತ್ತಿತರ ಕಡೆಗಳಲ್ಲಿ ಕೆಲಸ ಮಾಡಿದ್ದರು.

ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದಾರೆ ಎಂಬ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಶಾಂತಕುಮಾರ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಂಗಳೂರಿನಲ್ಲಿ 4 ಸೈಟು, 2 ಮನೆ, 1 ಕೋಟಿ ರೂ.ಗೂ ಅಧಿಕ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್, 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಾಹನಗಳು, ಅಕ್ರಮ ಆಸ್ತಿ ಪತ್ರಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು ಲೋಕಾಯುಕ್ತ ಎಸ್ಪಿ ಸೈಮನ್ ನಿದೇರ್ಶನದಂತೆ ಡಿವೈಎಸ್ಪಿ ಗಾನ ಪಿ. ಕುಮಾರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಚೆಲುವರಾಜ್, ಅಮಾನುಲ್ಲಾ, ಎ. ಸುರೇಶ್ ಕುಮಾರ್ ಸಹಿತ 4 ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News