ಮಂಗಳೂರು- ಪುತ್ತೂರು: ವಿದ್ಯುತ್ ಚಾಲಿತ ರೈಲು ಪ್ರಾಯೋಗಿಕ ಓಡಾಟ
ಮಂಗಳೂರು, ಜು.28: ನಗರ ಹೊರವಲಯದ ಪಡೀಲ್‌ನಿಂದ ಪುತ್ತೂರು ತನಕದ ವಿದ್ಯುದ್ಧೀಕರಣಗೊಂಡ ರೈಲು ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲು ಇಂಜಿನ್‌ನ ಪ್ರಾಯೋಗಿಕ ಓಡಾಟವು ಶುಕ್ರವಾರ ನಡೆಯಿತು.
ಮಧ್ಯಾಹ್ನ ಸುಮಾರು 2:30ಕ್ಕೆ ಪಡೀಲ್‌ನಿಂದ ಹೊರಟ ರೈಲು ಸಂಜೆ 4ಕ್ಕೆ ಪುತ್ತೂರು ತಲುಪಿತು. ಹಿಮ್ಮುಖ ದಿಕ್ಕಿನಲ್ಲಿ ಚಲಿಸುವಾಗ ವೇಗ ಪ್ರಯೋಗ ನಡೆಸಲಾಯಿತು ಎಂದು ಮೈಸೂರು ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್ (ಇಲೆಕ್ಟ್ರಿಕಲ್) ಸೌಂದರ್ ರಾಜನ್ ಮಾಹಿತಿ ನೀಡಿದ್ದಾರೆ.
ಈ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿಯು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಪ್ರಾಯೋಗಿಕ ಓಡಾಟ ನಡೆಸಿದ ವಿದ್ಯುದ್ಧೀಕರ ಗೊಂಡ ಮಾರ್ಗದಲ್ಲಿ ರೈಲುಗಳನ್ನು ಓಡಿಸಲು ಟ್ರ್ಯಾಕ್ ಫಿಟ್ ಪ್ರಮಾಣಪತ್ರ ಶೀಘ್ರ ದೊರೆಯಬಹುದು ಎಂದು ರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೈರುತ್ಯ ರೈಲ್ವೆ ಪ್ರಿನ್ಸಿಪಲ್ ಚೀಫ್ ಇಲೆಕ್ಟ್ರಿಕಲ್ ಇಂಜಿನಿಯರ್ ಜೈಪಾಲ್ ಸಿಂಗ್ ಪ್ರಾಯೋಗಿಕ ಓಡಾಟ ಮತ್ತು ಪರಿಶೀಲನೆಯ ನೇತೃತ್ವ ವಹಿಸಿದ್ದರು.
*ಸುಬ್ರಹ್ಮಣ್ಯ ರಸ್ತೆ ನಿಲ್ದಾಣ, ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ (ನೆಟ್ಟಣ) ವಿಭಾಗದಲ್ಲಿ (48 ಮಾರ್ಗ ಕಿ.ಮೀ) ವಿದ್ಯುದ್ದೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ಗೆ ಕಾಮಗಾರಿ ಪೂರ್ಣಗೊಳ್ಳಬಹುದು. ಸುಬ್ರಹ್ಮಣ್ಯ ರಸ್ತೆ ಮತ್ತು ಹಾಸನ ನಡುವಿನ ಮಂಗಳೂರು-ಹಾಸನ ವಿಭಾಗದ ವಿದ್ಯುದ್ದೀಕರಣಕ್ಕೆ ಇನ್ನೂ ಸ್ವಲ್ಪಸಮಯ ಬೇಕಾಗಬಹುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ರಸ್ತೆ ನಿಲ್ದಾಣದವರೆಗೆ ವಿದ್ಯುದ್ದೀಕರಣ ಕಾರ್ಯವು ಪೂರ್ಣಗೊಂಡಾಗ, ಸ್ಥಳೀಯ ರೈಲುಗಳನ್ನು ಇಲೆಕ್ಟ್ರಿಕಲ್ ಲೊಕೊಗಳಿಂದ ನಿರ್ವಹಿಸಬಹುದಾಗಿದೆ.
ಮೈಸೂರು-ಹಾಸನ-ಮಂಗಳೂರು ಮಾರ್ಗವು 2021ರ ಜುಲೈನಲ್ಲಿ ಅರಸೀಕೆರೆ-ಹಾಸನ (47 ಕಿಮೀ) ಸಹಿತ ಮೈಸೂರು-ಹಾಸನ- ಮಂಗಳೂರು ಮಾರ್ಗವನ್ನು (300 ಕಿಮೀ) ವಿದ್ಯುದ್ದೀಕರಿಸುವ ಗುತ್ತಿಗೆಯನ್ನು ಒದಗಿಸಲಾಗಿತ್ತು. ಜೂನ್ 2024ರೊಳಗೆ ಈ ಯೋಜನೆ ಪೂರ್ಣಗೊಳಿಸಲು2018ರ ಕೇಂದ್ರ ಬಜೆಟ್‌ನಲ್ಲಿ 315 ಕೋ.ರೂ ನಿಗದಿಪಡಿಸಲಾಗಿತ್ತು.