ಪರ್ಯಾಯ ವ್ಯವಸ್ಥೆಯ ಬಳಿಕವೇ ನಂತೂರು ಫ್ಲೈ ಓವರ್ ಕಾಮಗಾರಿ ಆರಂಭ ಮಾಡಲಿ: ಐವನ್ ಡಿಸೋಜಾ
ಮಂಗಳೂರು, ಡಿ.26: ನಂತೂರ್ ಜಂಕ್ಷನ್‌ನಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಅತೀ ಅಗತ್ಯವಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕಾಮಗಾರಿ ಆದೇಶವನ್ನು ಇನ್ನಷ್ಟೇ ನೀಡಬೇಕಾಗಿದೆ. ಪರ್ಯಾಯ ವ್ಯವಸ್ಥೆಯ ಬಳಿಕವೇ ಫ್ಲೈ ಓವರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಚೇರಿ ಕಟ್ಟಡದಲ್ಲಿರುವ ನೂತನ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಆಗ್ರಹಿಸಿದ ಅವರು, ಎನ್‌ಎಚ್‌ಎಐ ಅಧಿಕಾರಿಗಳ ಜತೆಗೆ ಈ ಬಗ್ಗೆ ಈಗಾಗಲೇ ಮಾತನಾಡಿರುವುದಾಗಿ ತಿಳಿಸಿದರು.
69 ಕೋಟಿ ರೂ.ಗಳ ಯೋಜನೆಗೆ ಟೆಂಡರ್ ಆಗಿದೆ. ಟೆಂಡರ್ ನಿಯಮದ ಪ್ರಕಾರ ಎರಡು ವರ್ಷಗಳ ಅವಧಿಗೆ ಈ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆಯ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಅಗತ್ಯ ಕಾಂಕ್ರೀಟ್ ಸರ್ವಿಸ್ ರಸ್ತೆಗಳೊಂದಿಗೆ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಈಗಾಗಲೇ ವಾಹನ ದಟ್ಟಣೆಯಿಂದ ಕೂಡಿರುವ ಈ ಪ್ರದೇಶದಲ್ಲಿ ಮತ್ತಷ್ಟು ತೊಂದರೆಗಳನ್ನು ಸಾರ್ವಜನಿಕರು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಮಲ್ಲಿಕಟ್ಟೆರಸ್ತೆಯಿಂದ ಬಿಕರ್ನಕಟ್ಟೆ ರಸ್ತೆಯಲ್ಲಿ ಓವರ್ ಪಾಸ್ ಸೇತುವೆ ಸಾಗಲಿದ್ದು, ರಾ.ಹೆದ್ದಾರಿ ಕೆಳಭಾಗದಲ್ಲಿ ಸಾಗಿ ಹೋಗಲಿದೆ ಎಂದು ಹೇಳಲಾಗಿದೆ. ಆದರೆ ಇಲ್ಲಿ ಯಾವ ರೀತಿಯಲ್ಲಿ ಕಾಮಗಾರಿ ಸಾಗಲಿದೆ ಎಂಬ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರಿಗೆ ಮಾಹಿತಿ ಇಲ್ಲದಿರುವುದು ಇತ್ತೀಚಿನ ಸಭೆಯಲ್ಲಿ ತಿಳಿದಿದ್ದು, ಈ ಬಗ್ಗೆ ಎನ್‌ಎಚ್‌ಎಐನಿಂದ ಸಾರ್ವಜನಿಕ ಅಹವಾಲು ಸಭೆಯನ್ನು ಆಯೋಜಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ವಿಧಾನಪರಿಷತ್ತಿನ 154ನೇ ಅಧಿವೇಶನದಲ್ಲಿ 45 ಪ್ರಶ್ನೆ ಕೇಳಲು ಅವಕಾಶವಿದ್ದು, ಆ ಅವಕಾಶವನ್ನು ಉಪಯೋಗಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹಲವು ಪ್ರಶ್ನೆಗಳನ್ನು ಪ್ರಸ್ತಾವಿಸಿ ಸಂಬಂಧಫಟ್ಟವರಿಂದ ಉತ್ತರ ಪಡೆದಿದ್ದೇನೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು 2025ರ ಮೇ ತಿಂಗಳಿಂದ ಕರಾವಳಿ ಪ್ರದೇಶ ಅಭಿವೃದ್ಧಿ ಮಂಡಳಿಯಾಗಿ ಪರಿವರ್ತನೆ ಮಾಡಿ ವಾರ್ಷಕ 250 ಕೋಟಿರೂ.ಗಳ ಅನುದಾನ ಒದಗಿಸುವುದಾಗಿ ಸಚಿವರು ತಿಳಿಸಿದ್ದಾರೆ. ಈ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ದಿ ಕಾರ್ಯಗಳು ಈ ಮಂಡಳಿ ಮೂಲಕ ನಡೆಯಲಿದೆ ಎಂದು ಅವರು ಹೇಳಿದರು.
ಕಂಬಳಕ್ಕೆ ಅನುದಾನಕ್ಕೆ ಸಂಬಂಧಿಸಿ ಪ್ರತಿ ಕಂಬಳಕ್ಕೆ ಐದು ಲಕ್ಷ ರೂ.ಗಳ ಅನುದಾನ ನೀಡುವ ಭರವಸೆ ದೊರಕಿದೆ. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರ ಬಾಕಿ ನೀಡುವ ನಿಟ್ಟಿನಲ್ಲಿ 10 ಕೋಟಿ ರೂ.ಗಳ್ನು ಒದಗಿಸಲು ಸಚಿವರು ಒಪ್ಪಿಗೆ ನೀಡಿದ್ದಾರೆ. ಪಶ್ಚಿಮ ವಾಹಿನಿ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಳ್ಳಲು 400 ಕೋಟಿ ರೂ. ನೀಡುವುದಾಗಿ ಸಭೆಯಲ್ಲಿ ಘೋಷಣೆ ಮಾಡಲಾಗಿದೆ.
ಮಂಗಳೂರು- ಮೂಡಬಿದ್ರೆ ಕಾರ್ಕಳ ನಡುವೆ ಈಗಾಗಲೇ ನಾಲ್ಕು ಸರಕಾರಿ ಬಸ್ಸುಗಳ ಓಡಾಟ ಆರಂಭಿಸಲಾಗಿದ್ದು ಮತ್ತೆ ನಾಲ್ಕು ಬಸ್ಸುಗಳ ಓಡಾಟಕ್ಕೆ ತಾತ್ಕಾಲಿಕ ಪರವಾನಿಗೆ ನೀಡಲು ಒಪ್ಪಿಗೆ ದೊರಕಿದ್ದು, ಈ ಮೂಲಕ ಶಕ್ತಿ ಯೋಜನೆಗೆ ಜಿಲ್ಲೆಯಲ್ಲಿ ಶಕ್ತಿ ತುಂಬುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ವಿಧಾನ ಪರಿಷತ್ ಕಲಾಪದಲ್ಲಿ ತಾವು ಪ್ರಸ್ತಾವಿಸಿದ ಹಲವು ವಿಷಯಗಳಿಗೆ ದೊರಕಿರುವ ಪ್ರತಿಕ್ರಿಯೆಗೆ ಸಂಬಂಧಿಸಿ ವಿವರ ನೀಡಿದರು.