ನೆರೆಮನೆಯ ಮಹಿಳೆ ಸ್ನಾನ ಮಾಡುವಾಗ ವೀಡಿಯೊ‌ ಚಿತ್ರೀಕರಣ: ಪಕ್ಷಿಕೆರೆ ಸಂಘಪರಿವಾರದ ಕಾರ್ಯಕರ್ತನ ಬಂಧನ

Update: 2023-08-04 14:57 GMT

ಸುಮಂತ್ ಪೂಜಾರಿ

ಮಂಗಳೂರು: ನೆರೆ‌ ಮನೆಯ ಮಹಿಳೆಯೊಬ್ಬರು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಸಂಘಪರಿವಾರದ ಕಾರ್ಯಕರ್ತನೊಬ್ಬನನ್ನು ಸ್ಥಳೀಯರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ವರದಿಯಾಗಿದೆ.

ಬಂಧಿತನನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎಂದು ತಿಳಿದು‌ ಬಂದಿದೆ. ಈತ ಹಿಂದೂ ಜಾಗರಣ ವೇದಿಕೆ ಪಕ್ಷಿಕೆರೆ ಘಟಕದ ಸಕ್ರೀಯ ಕಾರ್ಯಕರ್ತ ಎಂದು ತಿಳಿದು ಬಂದಿದೆ.

ಘಟನೆ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ಬುಧವಾರ ರಾತ್ರಿ 11 ಗಂಟೆಗೆ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.

ಆರೋಪಿ ಸುಮಂತ್ ತನ್ನ ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ‌ ಮಾಡುವುದನ್ನು ವೀಡಿಯೊ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು, ಈ ವೇಳೆ ನೆರೆಮನೆಯವರು ಸುಮಂತ್ ನನ್ನು ಹಿಡಿದು ಧಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ಸ್ನಾನ ಮಾಡುವ ವೀಡಿಯೊ ಮಾಡಿದ್ದ ಮೊಬೈಲ್‌ ಸಹಿತ ಆತನನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಸಂಘಪರಿವಾರದ ನಾಯಕರ ಒತ್ತಡಕ್ಕೆ ಮಣಿದ ಪೊಲೀಸರು ಯುವಕನ ವಿರುದ್ಧ ಠಾಣೆಯಲ್ಲೇ ಜಾಮಿನು ನೀಡಬಹುದಾದ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು ಎನ್ನಲಾಗಿದೆ.

ಈ ಮಧ್ಯೆ ಗುರುವಾರ ಆರೋಪಿಯ ಮಾವ ಠಾಣೆಗೆ ಬಂದು 50 ಸಾವಿರ ರೂ.‌ ಮೌಲ್ಯದ ಬಾಂಡ್ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಆರೋಪಿಯಿಂದ ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಮೊಬೈಲ್ ನಲ್ಲಿ ಇತ್ತು ಹಲವು ವೀಡಿಯೊಗಳು!

ನೆರೆ ಮನೆಯ ಮಹಿಳೆಯ ವೀಡಿಯೊ ಚಿತ್ರೀಕರಣ ಮಾಡಿದ್ದ ಆರೋಪಿ ಸುಮಂತ್‌ನನ್ನು ವಶಕ್ಕೆ ಪಡೆದುಕೊಳ್ಳುವ ಸಂದರ್ಭ ಆತ ವೀಡಿಯೊ ಚಿತ್ರೀಕರಿಸಿದ್ದ ಮೊಬೈಲ್ ಫೊನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸರ ವಿಚಾರಣೆಯ ವೇಳೆ ಮೊಬೈಲ್ ನಲ್ಲಿ ಇಂತಹಾ ಹಲವು ನಗ್ನ ಚಿತ್ರಗಳು ಇದ್ದವು ಎಂದು ಮೂಲವೊಂದು ಮಾಹಿತಿ ನೀಡಿದೆ.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News