ಅಲ್ಪ ಸಂಖ್ಯಾತರ ರಕ್ಷಣೆ ಬಹುಸಂಖ್ಯಾತರ ಜವಾಬ್ದಾರಿ: ಪ್ರಕಾಶ್ ರಾಜ್
ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದಲ್ಲಿ ಅಲ್ಪ ಸಂಖ್ಯಾತರ ರಕ್ಷಣೆ ಬಹುಸಂಖ್ಯಾತರ ಜವಾಬ್ದಾರಿಯಾಗಿದೆ ಎಂದು ಖ್ಯಾತ ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಎದ್ದೇಳು ಕರ್ನಾಟಕ ಸಂಘಟನೆಯ ಆಶ್ರಯದಲ್ಲಿ ಬಲ್ಮಠದ ಸಹೋದಯದಲ್ಲಿ ಸೋಮವಾರ ಬೆಳಿಗ್ಗೆ ನಡೆದ ದಕ್ಷಿಣ ಕನ್ನಡ ಜನಪರ ಸಂಘಟನೆಗಳ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತದ್ದರು.
ಈಗ ನಮ್ಮ ದೇಶದ ಮಹಾಪ್ರಭುಗಳ ಧೋರಣೆ ಹೇಗಿದೆ ಎಂದರೆ ನೀನು ಚಂದಾ ಕೊಡು ನಿನಗೆ ದಂಧೆ ಕೊಡುತ್ತೇನೆ. ಇಲ್ಲದಿದ್ದರೆ ನಾನು ಈ.ಡಿಯಿಂದ ದಂಡ ಹಾಕಿಸುತ್ತೇನೆ ಎಂಬ ಬೆದರಿಕೆಯನ್ನು ಹಾಕುತ್ತಿದ್ದಾರೆ. ಮಹಾಪ್ರಭುಗಳ ಈ ಧೋರಣೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ತಲುಪಿಸಬೇಕಾಗಿದೆ. ಅವರ ಮುಂದಿನ ಭವಿಷ್ಯ ಏನು ಗೊತ್ತಿಲ್ಲ ಎಂದು ಪ್ರಧಾನಿ ಮೋದಿ ಬಗ್ಗೆ ಪ್ರಕಾಶ್ ರಾಜ್ ಕುಟುಕಿದರು.
ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾಯಿತ ಸರಕಾರಗಳನ್ನು ಪಾಪದ ದುಡ್ಡಿನಿಂದ ಖರೀದಿಸುವ ವ್ಯವಸ್ಥೆ ಇದೆ. ಇದರ ಬಗ್ಗೆ ಜನರು, ಯುವಕರು ಯೋಚಿಸಬೇಕಾಗಿದೆ. ತೀರ್ಮಾನಿಸಬೇಕಾಗಿದೆ. ರಾಜಕಾರಣದ ಧರ್ಮ ಬೇರೆ , ಧರ್ಮದ ರಾಜಕಾರಣ ಬೇರೆ. ಇದರ ವ್ಯತ್ಯಾಸವನ್ನು ಜನರು ತಿಳಿದುಕೊಳ್ಳಬೇಕಾಗಿದೆ ಎಂದರು.
ತಲೆತಗ್ಗಿಸುವ ಕೆಟ್ಟ ಕೆಲಸ ಮಾಡಿಲ್ಲ;
ನನ್ನ ಮೇಲೆ ಈ.ಡಿ ರೈಡ್ ಮಾಡಿದರು. ಹದಿಮೂರುವರೆ ಗಂಟೆ ಕಾಲ ಕುಳ್ಳಿರಿಸಿದರು. ಆದರೆ ನನ್ನಲ್ಲಿ ಏನು ಸಿಗಲಿಲ್ಲ. ಆದರೆ ಏನು ಸಿಗದಿದ್ದರೂ ಕೊಯಮತ್ತೂರಿನ ಕೋರ್ಟ್‌ನಿಂದ ನೋಟಿಸ್ ಬಂದಿದೆ. ನಾನು ಇಂತದಕ್ಕೆಲ್ಲ ಹೆದರುವನಲ್ಲ. ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ನಾವು ಸತ್ಯ, ಪ್ರಾಮಾಣಿಕತೆಯಿಂದ ಇದ್ದರೆ ಯಾವುದಕ್ಕೂ ಹೆದರಬೇಕಾಗಿಲ್ಲ. ನಾನು ನನ್ನನ್ನು ಪ್ರೀತಿಸುವ ಹೆಂಡತಿ ಮಕ್ಕಳ ಮುಂದೆ , ಜನರ ಮುಂದೆ ತಲೆತಗ್ಗಿಸುವ ಕೆಟ್ಟ ಕೆಲಸವನ್ನು ಮಾಡಿಲ್ಲ. ನನಗೆ ಎಷ್ಟೇ ಆಸ್ತಿ ಇದ್ದರೂ ಮುಖ್ಯವಲ್ಲ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ ಮುಖ್ಯ. ನಾನು ಯಾವುದೇ ಪಕ್ಷದ ಕಾರ್ಯಕರ್ತ ಅಲ್ಲ. ಜನರ ಪರವಾಗಿ ಇದ್ದೇನೆ. ಜನರ ನಂಬಿಕೆಯನ್ನು ಬೆಳೆಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಜನರ ಸಹನೆ, ಶಾಂತಿಯನ್ನು ನೆಮ್ಮದಿಯನ್ನು ಕೆಡಿಸಿದ ಕಾರಣದಿಂದಾಗಿ ಹಿಂದಿನ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಂಡಿತು. ಎದ್ದೇಳು ಕರ್ನಾಟಕ ಜನರಿಗೆ ಸರಕಾರದ ಜನವಿರೋಧಿ ಧೋರಣೆಯನ್ನು ಜನರಿಗೆ ತಿಳಿಸುವಲ್ಲಿ ಒಳ್ಳೆಯ ಕೆಲಸ ಮಾಡಿದೆ. ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಭ್ರಷ್ಟಾಚಾರದಿಂದ ಕೂಡಿದ್ದ ಸರಕಾರವನ್ನು ಕಿತ್ತು ಎಸೆಯಲು ಶ್ರಮಿಸಿದೆ. ಅವರ ಪ್ರಯತ್ನ ಮುಂದುವರಿಯಬೇಕು. ಆದರೆ ನಾವು ಆಡಳಿತದ ಸರಕಾರ ಪರ ಇಲ್ಲ. ಜನರ ಪರ ಇದ್ದೇವೆ. ನಾವು ನಿಮ್ಮ ಪರಿವಾರ ಎಂಬ ಭಾವನೆ ಹಿಂದಿನ ಸರಕಾರ ಸಹನೆ, ಪ್ರೀತಿ, ಮಾನವೀಯತೆಯಿಂದ ಕೆಲಸ ಮಾಡಬೇಕು.
ಪುಣ್ಯಕೋಟಿ ಕಥೆ ಈಗ ನಡೆದರೆ ?
ಈಗಿನ ಪುಣ್ಯಕೋಟಿ ಕಥೆಯಲ್ಲಿ ಹುಲಿಗೆ ನಾಲ್ಕು ಮಕ್ಕಳಿವೆ. ಅಮ್ಮಾ ನೀನ್ಯಾಕೆ ಊಟ ಮಾಡುತ್ತಿಲ್ಲ. ನಮಗೆ ಹಸಿವಾಗುತ್ತಿದೆ. ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆ ಮಕ್ಕಳು ಹೇಳುವಾಗ ಹುಲಿ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಏನು ಮಾಡುವುದು ಆತ್ಮಹತ್ಯೆ ಮಾಡಿಕೊಳ್ಳಲು ಕಾನೂನಾತ್ಮಕ ತೊಡಕಿದೆ. ಆತ್ಮಹತ್ಯೆ ಪ್ರಯತ್ನದಲ್ಲಿ ಬದುಕಿ ಉಳಿದರೆ ಕೇಸ್ ಆಗುತ್ತದೆ. ಇಂತಹ ದ್ವಂದ್ವದಲ್ಲಿ ಹುಲಿ ಸಿಲುಕಿರುತ್ತದೆ. ಆಗ ಪುಣ್ಯಕೋಟಿ ಪ್ರವೇಶ ಆಗುತ್ತದೆ. ನನಗೆ ಇರುವುದು ಒಬ್ಬಳೇ ಮಗಳು. ನನಗೆ ಜೀವಕ್ಕೆ ಇರುವ ವಸ್ತು ಇದು. ಹೀಗಾಗಿ ಹುಲಿಯ ನಾಲ್ಕು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಪುಣ್ಯಕೋಟಿ ಹೇಳುವಂತಾಬೇಕು ... ಅಂತಹ ಪುಣ್ಯ ಕೋಟಿ ನಾವು ಆಗಬೇಕು ಎಂದರು.
ಎದ್ದೇಳು ಕರ್ನಾಟಕದ ರಾಜ್ಯ ಮುಖಂಡ ಕೆ.ಎಲ್ ಅಶೋಕ್ ಅವರು ಮಾತನಾಡಿ ಚುನಾವಣೆಗೆ ಇನ್ನು 30 ದಿನಗಳು ಬಾಕಿ ಉಳಿದಿವೆೆ. ಇದೊಂದು ಯುದ್ಧ . ಈ ಮಹಾಯುದ್ಧದಲ್ಲಿ ಗೆಲುವಿನ ಆಶಾವಾದದೊಂದಿಗೆ ನಾವು ಸಭೆ ಮಾಡುತ್ತಿದ್ದೆವೆ. ಪ್ರಕಾಶ್ ರೈ ಬದ್ಧತೆಯಿಂದ ಮತ್ತು ರಿಸ್ಕ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಉ.ಪ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲಬಹುದು. ಆದರೆ ಉಳಿದ ರಾಜ್ಯಗಳಲ್ಲಿ ಅವರಿಗೆ ಕಷ್ಟ. ಬಿಹಾರ, ಮಹಾರಾಷ್ಟ್ರ, ಪ.ಬಂಗಾಳ , ಕರ್ನಾಟಕದಲ್ಲಿ ನಾವು ಯಾವ ರೀತಿ ಕೊಡುಗೆ ನೀಡುತ್ತೇವೆ ಎನ್ನುವ ಬಗ್ಗೆ ಯೋಚಿಸಬೇಕಾಗಿದೆ. ಈಗಿನ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 17 ಸೀಟ್‌ಗಳು ಕಾಂಗ್ರೆಸ್‌ಗೆ ಬರುತ್ತದೆ. ದಕ್ಷಿಣ ಕನ್ನಡ ಪೈಪೋಟಿ ಇರುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕಾಗಿದೆ. ಶಿವಮೊಗ್ಗದಲ್ಲೂ ದೊಡ್ಡ ಬದಲಾವಣೆಯಾಗಲಿದೆ ಎಂದರು.
ಎದ್ದೇಳು ಕರ್ನಾಕದ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದ ಆಶೀರ್ವಾದ್ ತರಬೇತಿ ಕೇಂದ್ರದ ನಿರ್ದೇಶಕ ಫಾದರ್ ಅರುಣ್ ಲೂಯಿಸ್ ‘ ಈ ಸಂಘಟನೆ ಪ್ರಾರಂಭಗೊಂಡು ಹದಿನಾಲ್ಕು ತಿಂಗಳು ಆಗಿದೆ. ಆರಂಭದಲ್ಲಿ ೩೦ ಸಂಘಟನೆಗಳನ್ನು ಒಟ್ಟು ಸೇರಿಸಿ ಚರ್ಚಿಸಿದಾಗ ಕರ್ನಾಟದಲ್ಲಿ ಇನ್ನೂ ಮಾನವೀಯತೆ ಉಳಿದುಕೊಂಡಿದೆ ಎನ್ನುವುದು ಗೊತ್ತಾಯಿತು. ಬಳಿಕ ಉಡುಪಿಯಲ್ಲಿ ಸಹಬಾಳ್ವೆ ಸಮಾವೇಶವನ್ನು ಏರ್ಪಡಿಸಿದಾಗ 17,000 ಜನರು ಸೇರಿದ್ದರು. ಇದರಿಂದ ನಮಗೆ ಹುರುಪು ಉಂಟಾಯಿತು. ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ಕಿತ್ತು ಎಸೆಯುವ ಉದ್ದೇಶದೊಂದಿಗೆ ನಾವು ಹೆಜ್ಜೆ ಇರಿಸಿದ್ದೆವು. ಬದಲಾವಣೆಗಾಗಿ 103 ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದೆವು.ಅದರಲ್ಲಿ 73 ಕ್ಷೇತ್ರಗಳಲ್ಲಿ ನಮ್ಮ ಅಧ್ಯರ್ಥಿಗಳು ಗೆದ್ದುಕೊಂಡಿದ್ದಾರೆ. ಇದರಲ್ಲಿ 69 ಕಾಂಗ್ರೆಸ್ ಮತ್ತು 4 ಜೆಡಿಎಸ್ ಜಯಿಸಿದೆ. ಮುಂದಿನ ಚುನಾವಣೆಗೆ 8 ತಿಂಗಳಿನಿಂದ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು.
ಎದ್ದೇಳು ಕರ್ನಾಟಕ ಯಾವುದೇ ರಾಜಕೀಯ ಸಂಘಟನೆ ಅಲ್ಲ. ಅಥವಾ ಯಾವುದೇ ರಾಜಕೀಯ ಪಕ್ಷದ ಮುಖವಾಣಿ ಅಲ್ಲ. ಇದು ಜನಪರ ಸಂಘಟನೆಯಾಗಿದೆ ಎಂದು ಸಮನ್ವಯಕಾರ ಯಾಸಿನ್ ಶಿರೂರು ಹೇಳಿದರು.
ದ.ಕ.ಜಿಲ್ಲೆಯ ನರೇಟಿವ್ ಬಗ್ಗೆ ಖ್ಯಾತ ಚಿಂತಕ ಲೋಲಾಕ್ಷ ಮಾತನಾಡಿದರು. ರಾಜಕೀಯ ಮುಖಂಡ ಪಿ.ವಿ.ಮೋಹನ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಮುಖಂಡ ಮುಹಮ್ಮದ್ ಕುಂಞಿ ವಿಷಯ ಮಂಡಿಸಿದರು.
ನಿವೃತ್ತ ಡಿವೈಎಸ್‌ಪಿ ಟಿಸಿಎಂ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಎಲ್ಲರ ಸಹಕಾರ ಕೋರಿದರು. ಬರಹಗಾರ ಎಂಜಿ ಹೆಗ್ಗಡೆ, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಮತ್ತಿತತರು ಉಪಸ್ಥಿತರಿದ್ದರು.
ಸಮನ್ವಯಕಾರ ನಿಸಾರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.