ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ನಿಧನ
ಮಂಗಳೂರು, ಜು. 16: ಹಿರಿಯ ರಂಗಕರ್ಮಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಚಲನ ಚಿತ್ರ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ (93) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ನಾಳೆ ಪುರಭವನದಲ್ಲಿ ಮಧ್ಯಾಹ್ನ 1 ರಿಂದ 3 ಗಂಟೆ ತನಕ ಮೃತರ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕ ಅವರಿಚ್ಛೆಯಂತೆ ದೇಹದಾನ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕನ್ನಡ, ತುಳು ರಂಗ ಭೂಮಿಯಲ್ಲಿ ನೂರಾರು ಅತ್ಯುತ್ತಮ ಯಶಸ್ವಿ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದ ಸದಾನಂದ ಸುವರ್ಣ, ಘಟಶ್ರಾದ್ಧ,ಕುಬಿ ಮತ್ತು ಇಯಾಲದಂತಹ ಸದಭಿರುಚಿಯ ಸಿನೆಮಾಗಳನ್ನು, ಗುಡ್ಡೆದ ಭೂತದಂತಹ ಧಾರಾವಾಹಿ, ಶಿವರಾಮ ಕಾರಂತರ ಕುರಿತು ಆಪ್ತ ನೋಟವನ್ನು ನೀಡುವ ಸಾಕ್ಷ್ಯಚಿತ್ರ, ಧಾರಾವಾಹಿಗಳನ್ನು ಕೊಟ್ಟವರು.
ಮೂಲತಃ ದ.ಕ ಜಿಲ್ಲೆಯ ಮೂಲ್ಕಿಯವರಾದ ಸದಾನಂದ ಸುವರ್ಣ ಅವರು ಮುಂಬಯಿಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದವರು. ಮುಂಬೈನಲ್ಲಿ ರಾತ್ರಿ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ 5 ವರ್ಷ ಕೆಲಸ ಮಾಡಿದ ಅವರು, ಬಳಿಕ 3 ದಶಕಗಳ ಕಾಲ ಬಣ್ಣದ ವ್ಯಾಪಾರಿಯಾಗಿದ್ದರು. ನಾಟಕ ರಚನೆ, ನಟನೆ, ನಿರ್ದೇಶನದಲ್ಲಿ ಐದು ದಶಕಗಳ ಕಾಲ ಶ್ರಮಿಸಿದ ಅವರು, ಮುಂಬೈಯಲ್ಲಿ ಕನ್ನಡ ರಂಗಭೂಮಿಗೆ ಚೈತನ್ಯ ತುಂಬಿದರು. ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದ ಅವರು ಸಣ್ಣ ಕತೆ, ಕಾದಂಬರಿಗಳನ್ನು ಕೂಡ ಬರೆದಿದ್ದಾರೆ. ತಬರನ ಕತೆ, ಮನೆ, ಕ್ರೌರ್ಯ ಚಿತ್ರಗಳ ನಿರ್ವಾಹಕ ನಿರ್ಮಾಪಕರು. ಈ ಸಿನೆಮಾಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. 1989ರಲ್ಲಿ ತೇಜಸ್ವಿ ಅವರ ಸಣ್ಣ ಕತೆ ಆಧರಿತ ಕುಬಿ ಹಾಗೂ ಇಯಾಲ ಚಿತ್ರ ಅವರ ನಿರ್ದೇಶನದ ಮೊದಲ ಸಿನೆಮಾ.
ಗುಡ್ಡದ ಭೂತ ಅವರ ನಿರ್ದೇಶನದ ಜನಪ್ರಿಯ ಕಿರುತೆರೆಯ ಧಾರವಾಹಿ. ಶಿವರಾಮ ಕಾರಂತ, ಶ್ರೀ ನಾರಾಯಣ ಗುರು, ತುಳುನಾಡು ಒಂದು ಇಣುಕುನೋಟ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು.