ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಮಾ.9ರಂದು ಬಂಟ್ವಾಳದಲ್ಲಿ ಅಧಿವೇಶನ : ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಕೇಳಿದ ಜನ

ಮಂಗಳೂರು : ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಮಾರ್ಚ್ 16 ರಂದು ರವಿವಾರ ಅಧಿವೇಶನ ಏರ್ಪಡಿಸಿರುವ ಬಗ್ಗೆ ವೀಡಿಯೋ, ಪೋಸ್ಟರ್, ವಾಟ್ಸಪ್ ಮೆಸೇಜೊಂದು ವೈರಲ್ ಆಗಿದೆ.
ವೈರಾಲಾಗಿರುವ ವೀಡಿಯೊದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರು ಎಂದು ಉಲ್ಲೇಖಿಸಿರುವ ಚಂದ್ರ ಮೊಗವೀರ ಎಂಬವರು ಮಾತನಾಡಿದ್ದಾರೆ. ಅವರು, “ನಮಸ್ಕಾರ ಸಂಘೇ ಶಕ್ತಿ , ಕಲವಿಯುಗೇ ಕಲಿಯುಗದಲ್ಲಿ ಸಂಘಟಿತರಾಗುವುದಕ್ಕೆ ಅತ್ಯಂತ ಮಹತ್ವ ಇದೆ. ಹಾಗಾಗಿ ಎಲ್ಲಾ ಸಂಘಟನೆಗಳು ಒಟ್ಟಾಗಬೇಕು. ಎಲ್ಲಾ ಸಂಘಟನೆಗಳ ಮಧ್ಯೆ ಒಂದು ಆತ್ಮೀಯತೆ ನಿರ್ಮಾಣ ಆಗಬೇಕು. ಧರ್ಮ ಬಂಧುತ್ವ ನಿರ್ಮಾಣವಾಗಬೇಕು. ಹಾಗೆಯೇ ಎಲ್ಲಾ ಸಂಘಟನೆಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿ ಕಾರ್ಯವನ್ನು ಮಾಡಬೇಕು ಅನ್ನೋ ದೃಷ್ಟಿಯಿಂದ ಬಂಟವಾಳದಲ್ಲಿ ಪ್ರಾಂತೀಯ ಮಟ್ಟದ ಹಿಂದೂ ರಾಷ್ಟ್ರದ ಅಧಿವೇಶನ ಆಯೋಜನೆಯಾಗಿದೆ", ಎಂದು ಹೇಳಿದ್ದಾರೆ.
“ಹಾಗಾಗಿ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಗ್ರಾಮ ಮಟ್ಟದಲ್ಲಿ ಕಾರ್ಯ ಮಾಡುವ ಎಲ್ಲಾ ಸಂಘಟನೆಗಳು ಈ ಅಧಿವೇಶನದಲ್ಲಿ ಸಹಭಾಗಿಯಾಗಬೇಕು ಅಂತ ನಾನು ಆಮಂತ್ರಣವನ್ನುನೀಡುತ್ತಿದ್ದೇನೆ. ಈ ಅಧಿವೇಶನದಲ್ಲಿ ಸಹಭಾಗಿಯಾಗುವುದು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಒಂದು ಮಹತ್ವದ ಯೋಗದಾನ ಆಗಲಿಕ್ಕೆಇದೆ. ನಾವು ತಮ್ಮೆಲ್ಲರ ಆಗಮನಕ್ಕಾಗಿ ಕಾಯುತ್ತಿದ್ದೇವೆ ಬಂಟವಾಳದಲ್ಲಿ 10 ಗಂಟೆಗೆ” ಎಂದು ಚಂದ್ರ ಮೊಗವೀರ ಹೇಳಿದ್ದಾರೆ.
ಅದರ ಜೊತೆಗೆ ಹಂಚಿಕೆಯಾದ ಪೋಸ್ಟರಲ್ಲಿ ಹಿಂದೂ ರಾಷ್ಟ್ರದ ವಿಚಾರಧಾರೆಗಳನ್ನು ಈಗ ನೀವೂ ಸಹ ಕುಳಿತಲ್ಲಿಂದಲೇ ಕೇಳಿ... ಬಂಟ್ವಾಳದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದ ನೇರ ಪ್ರಸಾರ ಎಂದು ಕಾರ್ಯಕ್ರಮದ ಮಾಹಿತಿಯನ್ನು ನೀಡಲಾಗಿದೆ. ಮೆಸೇಜ್ ನಲ್ಲಿ ಜಯತು ಜಯತು ಹಿಂದುರಾಷ್ಟ್ರಮ್. ಹಿಂದೂಗಳ ಮೇಲಾಗುತ್ತಿರುವ ಅನೇಕ ಆಘಾತಗಳಿಗೆ ಏಕೈಕ ಪರಿಹಾರ ಎಂದರೆ ಭಾರತವನ್ನು ಹಿಂದೂ ರಾಷ್ಟ್ರವಾಗಿ ಮಾಡುವುದು. ಇದೇ 16 ಮಾರ್ಚ್ 2025, ರವಿವಾರದಂದು ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ಬಂಟ್ವಾಳ. ಆಯೋಜಕರು ಹಿಂದೂ ಜನಜಾಗೃತಿ ಸಮಿತಿ ಎಂದು ಬರೆಯಲಾಗಿದೆ.
ಕಾರ್ಯಕ್ರಮದ ಮಾಹಿತಿ ವೈರಲ್ ಆಗುತ್ತಿದ್ದಂತೆ ಜನರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿಯ ಕಾರ್ಯಕ್ರಮಗಳಿಗೆ ಅವಕಾಶವಿದೇಯೇ ಎಂದು ಕೇಳುತ್ತಿದ್ದಾರೆ. ಹಿಂದೂರಾಷ್ಟ್ರ ಸ್ಥಾಪನೆಗೆ ಇಲ್ಲಿ ಅವಕಾಶ ಇದೆಯೇ? ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸರಕಾರ ಏನು ಮಾಡುತ್ತಿದೆ. ಇವರ ವಿರುದ್ದ ಕ್ರಮ ಯಾಕಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ಸಭೆಗೆ ಸರಕಾರ, ಪೊಲೀಸ್ ಇಲಾಖೆ. ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿದೆಯೇ? ಅನುಮತಿ ನೀಡಿದ್ದರೆ ಯಾವ ಆಧಾರದಲ್ಲಿ ಅನುಮತಿ ನೀಡಲಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣ ಉತ್ತೇಜಿಸುವ ಕಾರ್ಯಕ್ರಮವನ್ನು ಏಕೆ ತಡೆಯುತ್ತಿಲ್ಲ. ಈ ರೀತಿಯ ಕಾರ್ಯಕ್ರಮ ಮಾಡಲು ಜಿಲ್ಲಾಡಳಿತ ಹೇಗೆ ಅವಕಾಶ ನೀಡಿದೆ? ಈ ರೀತಿಯ ಕಾಯ್ರಕ್ರಮಕ್ಕೆ ಕಾನೂನಿನ ಪ್ರಕಾರ ಇದಕ್ಕೆ ಅವಕಾಶ ಇದೆಯೇ? ಹಿಂದೂ ರಾಷ್ಟ್ರ ಸ್ಥಾಪನೆಗೆ ಜಾತ್ಯಾತೀತ ದೇಶದಲ್ಲಿ ಅವಕಾಶ ಇದೆಯೇ? ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹೇಗೆ ಅವಕಾಶ ನೀಡಿದೆ? ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಹಿಂದುತ್ವ ರಾಷ್ಟ್ರದ ಘೋಷಣೆಯನ್ನು ಬಹಿರಂಗವಾಗಿ ಮಾಡಲಾಗಿದೆ. ಏಕೆ ಇವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸುವುದಿಲ್ಲ? ಮುಂದಿನ ಎಲ್ಲಾ ಅನಾಹುತಕ್ಕೂ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಜನರು ಕಮೆಂಟ್ ನಲ್ಲಿ ತಿಳಿಸಿದ್ದಾರೆ.