ಮಂಗಳೂರಿನಲ್ಲಿ ಶಾಹೀನ್ ಸಂಸ್ಥೆಯ ಪ್ರಥಮ ಶಾಖೆ ಆರಂಭ

Update: 2025-03-15 12:45 IST
ಮಂಗಳೂರಿನಲ್ಲಿ ಶಾಹೀನ್ ಸಂಸ್ಥೆಯ ಪ್ರಥಮ ಶಾಖೆ ಆರಂಭ
  • whatsapp icon

ಮಂಗಳೂರು, ಮಾ .15: ಗುಣ ಮಟ್ಟದ ಶಿಕ್ಷಣದಲ್ಲಿ ಹೆಸರುವಾಸಿಯಾಗಿರುವ ಬೀದರ್ ಶಾಹೀನ್ ಗ್ರೂಪ್, ಮಂಗಳೂರಿನಲ್ಲಿ ಶೆಫರ್ಡ್ ಸಂಸ್ಥೆಯ ಸಹಯೋಗದಲ್ಲಿ ತನ್ನ ಪ್ರಥಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಿದೆ.

ಶನಿವಾರ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಾಹೀನ್ ಗ್ರೂಪ್ ನ ಸ್ಥಾಪಕ ಡಾ. ಅಬ್ದುಲ್ ಖಾದರ್, ಮಂಗಳೂರಿನ  ಅರ್ಕುಳದ 3.6 ಎಕರೆ ಪ್ರದೇಶದಲ್ಲಿ ಶೆಫರ್ಡ್ಸ್ ಶಾಹೀನ್ ಸಂಸ್ಥೆ ಕಾರ್ಯಾಚರಿಸಲಿದೆ. ಹೊಸ ಕ್ಯಾಂಪಸ್ ನಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಯಲ್ಲಿ ಉನ್ನತ ದರ್ಜೆ, ಆಧುನಿಕ ಸೌಲಭ್ಯಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಬೀದರ್‌ನಲ್ಲಿ 1989 ರಲ್ಲಿ 17 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್,  ಇಂದು ಭಾರತದ 13 ರಾಜ್ಯಗಳಲ್ಲಿ ಹಲವಾರು ಶಾಲೆಗಳು, ಪಿಯು ಕಾಲೇಜುಗಳು ಮತ್ತು ಪದವಿ ಕಾಲೇಜುಗಳನ್ನು ನಿರ್ವಹಿಸುತ್ತಿದೆ. ಸೌದಿ ಅರೇಬಿಯಾದಲ್ಲೂ ಶಾಖೆಯನ್ನು ಹೊಂದಿದೆ. ಭಾರತ ಮತ್ತು ವಿದೇಶದಾದ್ಯಂತ 105 ಶಾಖೆಗಳನ್ನು ಹೊಂದಿರುವ ಶಾಹೀನ್ 40,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು.

ಶಾಹೀನ್ ಗ್ರೂಪ್ ವಿಶೇಷವಾಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ 2008 ರಿಂದ, 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅನೇಕ ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಪ್ರತಿ ವರ್ಷ, ಶಾಹೀನ್ ವಿದ್ಯಾರ್ಥಿಗಳು ಭಾರತದಲ್ಲಿನ ಒಟ್ಟು ಸರ್ಕಾರಿ ಎಂಬಿಬಿಎಸ್ ಸೀಟುಗಳಲ್ಲಿ ಶೇ 1 ಮತ್ತು ಕರ್ನಾಟಕದಲ್ಲಿ ಶೇ. 15 ಸರ್ಕಾರಿ ಸೀಟುಗಳನ್ನು ಪಡೆದುಕೊಳ್ಳುತ್ತಾರೆ.

ಶಾಹೀನ್ ಸಂಸ್ಥೆಯ ನವೀನ ಪಠ್ಯಕ್ರಮ ಮತ್ತು ಅತ್ಯಾಧುನಿಕ ಮೂಲಸೌಕರ್ಯವು ಹಲವಾರು ರಾಷ್ಟ್ರೀಯ ಪುರಸ್ಕಾರಗಳನ್ನು ಗಳಿಸಿದೆ. ಶಾಹೀನ್ ನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು AIIMS ದೆಹಲಿಯಂತಹ ಉನ್ನತ ಸಂಸ್ಥೆಗಳಿಗೆ ಪ್ರವೇಶವನ್ನು ಗಳಿಸಿದ್ದಾರೆ ಎಂದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ದೆಹಲಿ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಅಸ್ಸಾಂ ಮತ್ತು ಜಾರ್ಖಂಡ್‌ನಲ್ಲಿ ಶಿಕ್ಷಣ ಸಂಸ್ಥೆ ಹೊಂದಿರುವ ಶಾಹೀನ್‌,  ಕರ್ನಾಟಕದಲ್ಲಿ ಬೀದರ್‌ನಲ್ಲಿ ಅನೇಕ ಕ್ಯಾಂಪಸ್‌ಗಳನ್ನು ನಿರ್ವಹಿಸುತ್ತಿದೆ. ಇದರಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಸೌಲಭ್ಯಗಳು ಸೇರಿವೆ. ವಿವಿಧ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಹಾಗೂ ಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಒಂದು ದಶಕದಿಂದ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿ ಮಂಗಳೂರಿನಲ್ಲಿ ಗುಣಮಟ್ಟದ ಶಿಕ್ಷಣದ ದಾರಿದೀಪವಾಗಿದೆ. ಅತ್ತಾವರದಲ್ಲಿ ಸ್ಥಾಪಿತವಾಗಿರುವ ಅಕಾಡೆಮಿಯು ತನ್ನ ಪ್ರಗತಿಪರ ಬೋಧನಾ ವಿಧಾನಗಳು ಮತ್ತು ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಖ್ಯಾತಿಯನ್ನು ಗಳಿಸಿದೆ ಎಂದು ಶಿಫರ್ಡ್ ಸಂಸ್ಥೆಯ ಅಧ್ಯಕ್ಷ , ಮೊಹಮ್ಮದ್ ನಿಸಾರ್ ಹೇಳಿದರು.

ಶೆಫರ್ಡ್ಸ್ ಇಂಟರ್ನ್ಯಾಷನಲ್ ಅಕಾಡೆಮಿ ಮತ್ತು ಶಾಹೀನ್ ಗ್ರೂಪ್ ನಡುವಿನ ಸಹಯೋಗವು ಮಂಗಳೂರಿನ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯ ತೆರೆಯಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ಕೃಷ್ಟತೆಯನ್ನು ಬಲವಾದ ನೈತಿಕ ಮೌಲ್ಯಗಳೊಂದಿಗೆ ಸಂಯೋಜಿಸುವ ಸಮೃದ್ಧ ಕಲಿಕೆಯ ಅನುಭವವನ್ನು ನೀಡಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿ ಯಲ್ಲಿ ಶೆಫರ್ಡ್ ಶಾಹೀನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಿಜ್ವಾನ್, ಕೋಶಾಧಿಕಾರಿ ಸಾಜಿದ್ ಎ.ಕೆ. , ಟ್ರಸ್ಟಿಗಳಾದ ಮೊಹಮ್ಮದ್ ಫಾರೂಕ್, ನೌಶಾದ್ ಎ.ಕೆ, ಶಾಹೀನ್ ಗ್ರೂಪ್ ನ ರೀಜಿನಲ್ ಮುಖ್ಯಸ್ಥ ಶೇಕ್ ಶಫೀಕ್ ಉಪಸ್ಥಿತರಿದ್ದರು.‌




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News