ನ.24 : ಮಂಗಳೂರಿನಲ್ಲಿ 'ಉರ್ದು ಮೆಹಫಿಲೇ ಮುಷಾಯಿರ' ಕಾರ್ಯಕ್ರಮ

Update: 2023-11-22 11:59 GMT

ಮಂಗಳೂರು: ಉರ್ದು ಭಾಷೆಯಲ್ಲಿ ಕಾವ್ಯ ಗೋಷ್ಠಿ ಕಾರ್ಯಕ್ರಮ 'ಉರ್ದು ಮೆಹಫಿಲೇ ಮುಷಾಯಿರ' ಶುಕ್ರವಾರ ನವೆಂಬರ್ 24 ರಂದು ಸಂಜೆ 6.30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

ಉರ್ದು ಭಾಷೆ, ಸಾಹಿತ್ಯ ಹಾಗು ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಿರುವ, ರಾಜ್ಯ ಹಾಗು ಹೊರರಾಜ್ಯಗಳ ಖ್ಯಾತ ಉರ್ದು ಕವಿಗಳು ಭಾಗವಹಿಸಲಿರುವ ಈ ವಿಶಿಷ್ಟ ಕಾರ್ಯಕ್ರಮ ದುಬೈನ ಪ್ರತಿಷ್ಠಿತ ಸಿ ಎಚ್ ಎಸ್ ಗ್ರೂಪ್ ನ ಸ್ಥಾಪಕ ಹಾಗು ಅಧ್ಯಕ್ಷ, ಖ್ಯಾತ ಎನ್ನಾರೈ ಉದ್ಯಮಿ ನಾಸಿರ್ ಸಯ್ಯದ್ ಅವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಂಜುಮನ್ ತರಕ್ಕೀ ಉರ್ದು ಸಂಘಟನೆಯ ಅಧ್ಯಕ್ಷ ಅಬ್ದುಲ್ ಸಲಾಂ ಮದನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಅಝೀಝುದ್ದೀನ್ ಅಝೀಝ್ ಬೆಳಗಾಮಿ, ಭಟ್ಕಳದ ಡಾ. ಮೊಹಮ್ಮದ್ ಹನೀಫ್ ಶಬಾಬ್, ಮುಂಬೈನ ಸಿರಾಜ್ ಶೋಲಾಪುರಿ, ಭಟ್ಕಳದ ಸಯ್ಯದ್ ಅಹ್ಮದ್ ಸಾಲಿಕ್ ನದ್ವಿ, ಶಿವಮೊಗ್ಗದ ರಹ್ಮತ್ ಉಲ್ಲಾ ರಹ್ಮತ್ , ಗಂಗೊಳ್ಳಿಯ ಉಸಾಮ ಖಾಝಿ ಅಸದ್ ಕರ್ನಾಟಕಿ ಹಾಗು ಮಂಗಳೂರಿನ ಅಬ್ದುಲ್ ಸಲಾಂ ಮದನಿ ಅವರು ಅಂದು ಕಾರ್ಯಕ್ರಮ ನೀಡಲಿದ್ದಾರೆ.

ಸಿ ಎಚ್ ಎಸ್ ಗ್ರೂಪ್ ನ ಅಧ್ಯಕ್ಷ ನಾಸಿರ್ ಸಯ್ಯದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅದರ ಜೊತೆಗೆ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಲ್ಲ ಉರ್ದು ಸಾಹಿತ್ಯ ಹಾಗು ಕಾವ್ಯ ಪ್ರಿಯರು ಈ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಭಾಗವಹಿಸಬೇಕು ಎಂದು ಅಂಜುಮನ್ ತರಕ್ಕೀ ಉರ್ದು ಸಂಘಟನೆ ವಿನಂತಿಸಿದೆ.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News