ದಾವಣಗೆರೆ | ಕೆರೆಯಲ್ಲಿ ಪುರಾತನ ಕಾಲದ ಶಿಲ್ಪ ಪತ್ತೆ

Update: 2024-07-17 08:59 GMT

ಕೆರೆಯಲ್ಲಿ ಪತ್ತೆಯಾಗಿರುವ ಶಿಲ್ಪ

ನ್ಯಾಮತಿ : ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ಪುರಾತನ ಶಿಲ್ಪವೊಂದು ಪತ್ತೆಯಾಗಿದೆ ಎಂದು ಇತಿಹಾಸ ತಜ್ಞ ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.

ಹೊಸಕೆರೆಯಲ್ಲಿ ಅಪರೂಪದ ಶಿಲ್ಪ ಕಂಡುಬಂದಿದ್ದು, ಶಿಲ್ಪದ ಕೆಲ ಲಕ್ಷಣಗಳುನ್ನು ಗಮನಿಸಿದರೆ ಭೈರವ ಶಿಲ್ಪದಂತೆ ಕಂಡು ಬಂದರೂ ಇನ್ನು ಕೆಲ ಲಕ್ಷಣಗಳನ್ನು ಗಮನಿಸಿದಾಗ ವೀರಭದ್ರ ಶಿಲ್ಪದಂತೆ ಭಾಸವಾಗುತ್ತದೆ. ವಿಜಯನಗರ ಕಾಲಕ್ಕೆ ಸೇರಿದ್ದ ಶಿಲ್ಪ ಇದಾಗಿದೆ ಎಂದು ಅವರು ಹೇಳುತ್ತಾರೆ. 

ಶಿಲ್ಪ ಚತುರ್ಭುಜ ಹೊಂದಿದ್ದು, ಬಲಭಾಗದ ಮುಂಗೈಯಲ್ಲಿ ಖಡ್ಗವನ್ನು ಮೇಲ್ಮುಖವಾಗಿ ಭುಜದ ಮೇಲೆ ಇಟ್ಟುಕೊಂಡಿರುವ ರೀತಿಯಲ್ಲಿದೆ. ಬಲಭಾಗದ ಇನ್ನೊಂದು ಕೈಯಲ್ಲಿ ತ್ರಿಶೂಲವಿದೆ. ಶಿಲ್ಪದ ಎಡಗೈಯೊಂದು ಭಗ್ನಗೊಂಡಿದೆ, ಇನ್ನೊಂದು ಕೈಯಲ್ಲಿ ಪಾಶ ಇದೆ ಎಂದು ಬಾಲಕೃಷ್ಣ ಹೆಗಡೆ ವಿವರಿಸಿದ್ದಾರೆ.

ಶಿರದ ಎಡ, ಬಲ ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಸಾಮಾನ್ಯವಾಗಿ ವೀರ ಗಲ್ಲುಗಳಲ್ಲಿ ಈ ತರಹದ ಕೆತ್ತನೆಗಳನ್ನು ಕಾಣುತ್ತೇವೆ, ಆದರೆ ಇದು ವೀರಗಲ್ಲು ಅಲ್ಲ. ಈ ಶಿಲ್ಪದಲ್ಲಿ ಎಲ್ಲಿಯೂ ಶಾಸನ ಕೆತ್ತನೆ ಕಂಡುಬಂದಂತ್ತಿಲ್ಲ. ಈ ಶಿಲ್ಪದ ಎಡ ಭಾಗದಲ್ಲಿ ಒಂದು ಚಿಕ್ಕ ಶಿಲ್ಪದ ಕೆತ್ತನೆ ಇದೆ. ವೀರಭದ್ರ ಶಿಲ್ಪವಾಗಿದ್ದರೆ ಇಕ್ಕೆಲೆಗಳಲ್ಲಿ ದಕ್ಷ-ಬ್ರಹ್ಮ ಶಿಲ್ಪಗಳು ಇರುತ್ತವೆ ಎಂದಿರುವ ಅವರು, ಸದರಿ ಶಿಲ್ಪ ರುಂಢಮಾಲಾಧಾರಿಯಾಗಿದ್ದರೂ ಇದು ಕಾಳಿಯ ಶಿಲ್ಪ ಎಂದು ಹೇಳುವುದೂ ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಶಿಲ್ಪ ಶಿವಗಣ ಶಿಲ್ಪವಾಗಿರಬಹುದು ಎಂದು ಹಿರಿಯ ಶಾಸನತಜ್ಞ ಜಗದೀಶ ಆಗಸಿ ಬಾಗಿಲವರ್ ಅಭಿಪ್ರಾಪಟ್ಟಿದ್ದಾರೆ ಎಂದೂ ಹೆಗಡೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಶಿಲ್ಪಶಾಸ್ತ್ರದ ದೃಷ್ಣಿಯಿಂದ ಈ ಶಿಲ್ಪ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದರ ಕುರಿತು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ. ಬಳಿಕವಷ್ಟೇ ಈ ಶಿಲ್ಪ ಏನಿರಬಹುದೆಂದು ನಿಖರವಾಗಿ ಹೇಳಬಹುದು ಎಂದು ಹೆಗಡೆ ಹೇಳಿದ್ದಾರೆ.

ಕೆರೆಯಲ್ಲಿ ಕಂಡುಬಂದ ಶಿಲ್ಪದ ಬಗ್ಗೆ ಸವಳಂಗ ಗ್ರಾಮಸ್ಥರು ಇತಿಹಾಸ ತಜ್ಞರ ಗಮನಕ್ಕೆ ತಂದಿದ್ದಾರೆ ಎಂದು ಸವಳಂಗ ಗ್ರಾಮ ಪಂಚಾಯಿತಿ ಸದಸ್ಯ ಕೊಡತಾಳು ನಾಗರಾಜನಾಯ್ಕ, ಬಂಜಾರ ವಿದ್ಯಾರ್ಥಿಸಂಘದ ಅಧ್ಯಕ್ಷ ಮಂಜುನಾಯ್ಕ, ಪ್ರಧಾನ ಕಾರ್ಯದರ್ಶಿ ಕಿರಣನಾಯ್ಕ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News