ಯತ್ನಾಳ್‌ಗೆ ನೋಟೀಸ್ ಕೊಟ್ಟಿದ್ದಕ್ಕೆ ಖುಷಿ ಪಡುವಷ್ಟು ವಿಕೃತ ಮನಸ್ಸು ನಮ್ಮದಲ್ಲ : ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ : "ಇಲ್ಲಿ ನಾನು ಅಂತ ಮರೆದವರು ಯಾರೂ ಉಳಿದಿಲ್ಲ. ನನ್ನಿಂದ ನನ್ನಿಂದಲೇ ಎನ್ನುವ ಮನೋಭಾವ ಇಟ್ಟುಕೊಳ್ಳಬಾರದು. ಯತ್ನಾಳ್ ಅವರಿಗೆ ನೋಟೀಸ್ ಕೊಟ್ಟಿದ್ದಕ್ಕೆ ನನಗೆ ನೋವು ಇಲ್ಲ, ಖುಷಿಯೂ ಇಲ್ಲ. ನೋಟೀಸ್ ಕೊಟ್ಟಿದ್ದಕ್ಕೆ ಖುಷಿ ಪಡುವಷ್ಟು ವಿಕೃತ ಮನಸ್ಸು ನಮ್ಮದಲ್ಲ" ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸೋಮವಾರ ಹೊನ್ನಾಳಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಬಿಜೆಪಿ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಪಕ್ಷ ಎಂದು ಬಂದಾಗ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಮುಖ್ಯವಾಗಿರುತ್ತಾರೆ. ಒಬ್ಬ ಯುವಕ ಸಂಘಟನೆಗೆಬೇಕು ಎಂದು ರಾಷ್ಟ್ರೀಯ ನಾಯಕರು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಆದರೆ, ಕೆಲವೊಂದಿಬ್ಬರು ಅದನ್ನು ವಿರೋಧ ಮಾಡಿದರು. ಕಳೆದ ಚುನಾವಣೆಗಳಲ್ಲಿ ಸೋಲಿಗೆ ಕೆಲವರು ಕಾರಣರಾಗಿದ್ದಾರೆ. ನಮ್ಮ ಒಳ ಜಗಳಗಳೇ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.
ಅದೇ ರೀತಿ ಹಿರಿಯರು ನಿರ್ಣಯ ಮಾಡಿದ್ದರಿಂದ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿದರು. ಏನಾದರೂ ಸಮಸ್ಯೆ ಭಿನ್ನಮತ ಇದ್ದರೆ ನಾಲ್ಕು ಗೋಡೆಗಳ ನಡುವೆ ಬಗೆಹರಿಸಿಕೊಳ್ಳಬೇಕು. ಮಂತ್ರಿಯಾಗಲಿಲ್ಲ, ರಾಜ್ಯಾಧ್ಯಕ್ಷ ಆಗಲಿಲ್ಲ, ವಿಪಕ್ಷ ನಾಯಕ ಆಗಲಿಲ್ಲ ಎಂದು ಈ ರೀತಿ ಮಾತನಾಡುತ್ತಿದ್ದಾರೆ. ಕೇಂದ್ರ ನಾಯಕರು ಹೇಳಿದರೂ ಕೇಳದೆ ವಕ್ಫ್ ವಿರುದ್ದ ಪ್ರತ್ಯೇಕ ತಂಡ ರಚನೆ ಮಾಡಿದರು. ವಿಜಯೇಂದ್ರ ಚಿಕ್ಕವನು ಎಂದು ಹೇಳಿ ಬೇಕಾದ ರೀತಿ ಬೈದರೇ ಹೇಗೆ. ಹೊಂದಾಣಿಕೆ ರಾಜಕಾರಣ ಎಂದು ಅರೋಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಎಂ ಸಿದ್ದರಾಮಯ್ಯ, ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಇದು ಹೊಂದಾಣಿಕೆ ರಾಜಕಾರಣ ಆಗುತ್ತಾ. ಅಭಿವೃದ್ಧಿ ಕೆಲಸಕ್ಕೆ ಚರ್ಚೆ ಮಾಡಲು ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿರುತ್ತಾರೆ ಎಂದರು.
ಪ್ರತಾಪ್ ಸಿಂಹಗೆ ಟಿಕೇಟ್ ಏಕೆ ಕೊಡಲಿಲ್ಲ ಎಂದು ಅತ್ಮವಲೋಕನ ಮಾಡಿಕೊಳ್ಳಲಿ. ಅವರು ಒಂದು ಗ್ರಾಮ ಪಂಚಾಯತ್ ಗೆಲುವಿಗೆ ಶ್ರಮಿಸಿದ್ದಾರೆಯೇ. ಗೆಲ್ಲಿಸಿಕೊಂಡು ಬಂದಿದ್ದಾರಾ ಎಂದು ಹೇಳಲಿ ಎಂದರು.
ಡಿ.10ರಂದು ದಾವಣಗೆರೆಯಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸಭೆ ಮಾಡುತ್ತೇವೆ. ಡಿ.11ರಂದು ಪೂರ್ವಭಾವಿ ಸಭೆ ಮಾಡಿ ಸಮಾವೇಶಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಶಕ್ತಿ ಪ್ರದರ್ಶನದ ಸಮಾವೇಶ ಅಲ್ಲ ಎಂದರು.