ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ : ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಡಿ.10ರಂದು ಬೆಳಗ್ಗೆ10 ಗಂಟೆಗೆ ಬೆಳಗಾವಿಯ ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ಗಳೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮದ ಗುರುಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಪಡೆಯಲು 2ಎಗೆ ಸೇರ್ಪಡೆ ಮಾಡಬೇಕೆಂದು ನಾಲ್ಕು ವರ್ಷದಿಂದ ನಿರಂತರವಾಗಿ ಪ್ರಾಮಾಣಿಕ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಿಂದಿನ ಬಿಜೆಪಿ ಸರಕಾರ ಕೊನೆಗಳಿಗೆಯಲ್ಲಿ ನಿರ್ಧಾರ ತೆಗೆದುಕೊಂಡಿತಾದರೂ ಮೀಸಲಾತಿ ಪ್ರಸ್ತಾಪ ಅಲ್ಲಿಗೆ ಸ್ಥಗಿತವಾಗಿತು. ಆದರೆ, ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಿಸಬಾರದು ಹಾಗೂ ಹೋರಾಟ ಗಟ್ಟಿಗೊಳಿಸಲು ನಿರಂತರ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರಕಾರ ನಮ್ಮ ಹೋರಾಟಕ್ಕೆ ಮನ್ನಣೆ ನೀಡುತ್ತಿಲ್ಲ. ಮುಖ್ಯಮಂತ್ರಿಗಳು ಮೀಸಲಾತಿ ಕುರಿತು ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸರಕಾರಕ್ಕೆ ನಮ್ಮ ಕೂಗು ಮುಟ್ಟುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ನಮಗೆ ಮೀಸಲಾತಿ ಕೊಡಿ ಅನುದಾನ ಬೇಡ, ಅಧಿಕಾರ ಬೇಡ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾತಿ ಕೂಲಿ ಕೇಳಿದ್ದೇವೆ. ಎಲ್ಲಾ ಲಿಂಗಾಯತ ಉಪ ಸಮುದಾಯಗಳಿಗೆ ಮೀಸಲಾತಿ ಕೇಳಿದ್ದೇವೆ. ಆದರೆ ಯಾವುದೇ ಮನ್ನಣೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೋರಾಟದ ಮೂಲಕ ಹಕ್ಕೊತ್ತಾಯ ಮಾಡಲು ಡಿ.10ರಂದು ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ತೀರ್ಮಾನ ಕೈಗೊಂಡಿದ್ದೇವೆ ನಮ್ಮ ಹೋರಾಟಕ್ಕೆ ಪಕ್ಷಾತೀತ ಬೆಂಬಲ ನೀಡಬೇಕು. ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ಪ್ರತಿಭಟನೆಯ ಮುಂದಾಳತ್ವವನ್ನು ಪಂಚಮಸಾಲಿ ಹೋರಾಟ ಸಮಿತಿ ವಹಿಸಿಕೊಳ್ಳಲಿದೆ. ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹೋರಾಟಕ್ಕೆ ಬರಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಪಂಚಮಸಾಲಿ ಹೋರಾಟ ಕವಲು ದಾರಿಯಲ್ಲ. ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಯಾರು ಮಾಡಬಾರದು. ನಮ್ಮ ನಾಯಕರು ಸರಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕು. ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗೂಡಬೇಕು. ಸಮಾಜ 2ಎ ಮೀಸಲಾತಿ ಪಡೆಯುವ ಉದ್ದೇಶ ಮುಖ್ಯ. ವೈಯಕ್ತಿಕ ವಿಚಾರ ಪ್ರಸ್ತಾಪ ಬೇಡ. ಹೋರಾಟದ ತೀಕ್ಷ್ಣತೆಗೆ ತಣ್ಣಿರು ಎರಚಬಾರದು. ಶ್ರೀಗಳು ಯಾವ ಹೋರಾಟದ ನಾಯಕರ ಪರ ಅಲ್ಲ. ಶ್ರೀಗಳು ನಿರಂತರ ಹೋರಾಟ ಮಾಡುತ್ತಿದ್ದಾರೆ. ಕೆಲವರು ಶ್ರೀಗಳ ಮೇಲೆ ಆರೋಪ ಮಾಡಿದರು. ಶ್ರೀ ಗಳು ಪೀಠ ಬಿಟ್ಟು ನಿರಂತರ ಹೋರಾಟ ಮಾಡುತ್ತಿದ್ದಾರೆ. ಶ್ರೀಗಳ ಬಗ್ಗೆ ಅಪನಂಬಿಕೆ ಬೇಡ, ಶ್ರೀಗಳಿಗೆ ಸಮಾಜದ ಕಳಕಳಿ ಇದೆ ಎಂದರು.
ಮಾಜಿ ಮೇಯರ್ ಬಿ.ಜಿ ಅಜಯಕುಮಾರ್, ಕಾರಿಗನೂರು ಕಲ್ಲೇಶಪ್ಪ, ಚನ್ನಬಸವನಗೌಡ್ರು, ಮಯೂರ್, ಆನಂದ ಜಿರ್ಲೆ, ಬಿ.ಜಿ ಭರತ್, ಕೊಟ್ರೆಶ್, ಚಂದ್ರು ಮಹೇಶ್ ಉಪಸ್ಥಿತರಿದ್ದರು.