ಕಾಂತರಾಜು ವರದಿ ಜಾರಿಗೆ ಮೊದಲು ಸಾರ್ವಜನಿಕ ಚರ್ಚೆಗೆ ಬರಲಿ : ಶಿವಸುಂದರ್

Update: 2024-12-16 06:39 GMT

ದಾವಣಗೆರೆ : ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಜಾರಿಗೆ ಮೊದಲು ಸಾರ್ವಜನಿಕ ಚರ್ಚೆಗೆ ಬರಬೇಕು ಎಂದು ಅಂಕಣಕಾರ ಶಿವಸುಂದ‌ರ್ ಹೇಳಿದ್ದಾರೆ

ನಗರದ ರೋಟರಿ ಬಾಲಭವನದಲ್ಲಿ ರವಿವಾರ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಜಾಗೃತ ವೇದಿಕೆಯಿಂದ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಕುರಿತು ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂತರಾಜು ವರದಿ ಜಾರಿ ಮಾಡುವುದು ಬಿಡುವುದು ನಂತರ ಆದರೆ, ಮೊದಲು ಸಾರ್ವಜನಿಕ ಚರ್ಚೆಗೆ ಬರಬೇಕು. ಅವಶ್ಯಕತೆ ಇದ್ದರೆ ಜಾರಿ ಮಾಡಿ ಇಲ್ಲವೇ ಬಿಡಿ ಎಂದರು.

ಕಾಂತರಾಜು ವರದಿ ಜಾರಿ ಹೋರಾಟದ ಜೊತೆಗೆ ಮೇಲ್ವರ್ಗದ ಜನರಿಗೆ ನೀಡಿರುವ ಮೀಸಲಾತಿ ವಿರುದ್ಧವೂ ಹೋರಾಟ ಮಾಡುವುದು ಅವಶ್ಯವಾಗಿದೆ. ಸಂವಿಧಾನದ ಪರ ಇದ್ದೇವೆ ಎಂದು ಬೊಗಳೆ ಬಿಡುವವರ ವಿರುದ್ಧ ಪ್ರಶ್ನೆ ಕೇಳುವ ಅವಶ್ಯವಿದೆ. ದುರ್ಬಲ ವರ್ಗದ ಜನರನ್ನು ಬಳಸಿಕೊಂಡು ಶಕ್ತಿಯುತವಾಗಿ ಬೆಳೆಯುತ್ತಿರುವವರ ಬಗ್ಗೆ ಜಾಗೃತವಹಿಸಬೇಕು ಎಂದು ಸಲಹೆ ನೀಡಿದರು.

ಮೀಸಲಾತಿ ಜೊತೆಗೆ ಭದ್ರತೆ, ಆರೋಗ್ಯ, ಉದ್ಯೋಗ ಎಲ್ಲರಿಗೂ ಸಿಗಬೇಕು. ಎಲ್ಲಿಯ ತನಕ ಜಾತಿ ವ್ಯವಸ್ಥೆ ನಾಶವಾಗುವುದಿಲ್ಲವೋ ಅಲ್ಲಿಯ ತನಕ ಸಮಾನತೆ ಮೂಡುವುದಿಲ್ಲ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಅಂತ ಹೇಳಿದ್ದಾರೆ. ಆದರೆ, ಚನ್ನಪ್ಪ ರೆಡ್ಡಿ ಆಯೋಗ ನೀಡಿದ ಶೈಕ್ಷಣಿಕ ಮತ್ತು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರದಿ ಹಿನ್ನೆಲೆಯಲ್ಲಿ ಒಬಿಸಿ ಮೀಸಲಾತಿ ನೀಡಲಾಗಿದೆ. ಧರ್ಮಾಧಾರಿತ ಮೀಸಲಾತಿ ಎಂಬುದು ಇಲ್ಲ. ಇಲ್ಲಿ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದರು.

ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿ.ಪ.ಸದಸ್ಯ ಅಬ್ದುಲ್ ಜಬ್ಬಾರ್, ಕಾಂತರಾಜು ಆಯೋಗದ ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಲವು ಇದೆ. ಆದರೆ, ಬಲಿಷ್ಠ ಸಮುದಾಯಗಳ ಒತ್ತಡವಿದೆ. ಈ ನಿಟ್ಟಿನಲ್ಲಿ ಜಾರಿ ತಡವಾಗಿದೆ ಆದರೆ ಮುಖ್ಯಮಂತ್ರಿಯವರಿಗೆ ಎಲ್ಲರೂ ಬಲ ನೀಡಿದರೆ ಕಾಂತರಾಜ ವರದಿ ಜಾರಿಗೆ ಬರಲಿದೆ ಎಂದು ತಿಳಿಸಿದರು.

ನಮಗೆ ನ್ಯಾಯ ಸಿಗಬೇಕಾದರೆ ನಾವು ಮೊದಲು ಜಾಗೃತರಾಗಬೇಕು. ದೊಡ್ಡಮಟ್ಟದಲ್ಲಿ ಸಭೆಗಳು ನಡೆಯಬೇಕು. ತಾಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಈ ಸಂಬಂಧ ಸಭೆ ನಡೆಸಲಾಗುವುದು ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಜಾಗೃತ ವೇದಿಕೆ ಅಧ್ಯಕ್ಷ ಅಬ್ದುಲ್ ಘನಿ ತಾಹೀರ್ ಮಾತನಾಡಿ, ಹಿಂದುಳಿದ ಸಮುದಾಯಗಳ ಸಾಮಾಜಿಕ ಸ್ಥಿತಿಗತಿ ಅಧ್ಯಯನಕ್ಕೆ 168 ಕೋಟಿ ರೂ. ವೆಚ್ಚದಲ್ಲಿ ವರದಿ ಸಿದ್ಧವಾಗಿದೆ. ಆದರೆ, ಜಾರಿಗೆ ಮಾತ್ರ ಅಡ್ಡಿಗಳು ಬರುತ್ತಿವೆ. ಹಿಂದುಳಿದ ಸಮುದಾಯಗಳ ನಿಖರ ಅಂಕಿ-ಅಂಶಗಳು ತಿಳಿಯಬೇಕಾದರೆ ಕಾಂತರಾಜು ವರದಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನೆರಳು ಬೀಡಿ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ಬಿ.ಎಚ್.ಪರಶುರಾಮಪ್ಪ, ಎಂ.ಜಯಣ್ಣ ವಕೀಲರಾದ ರು ಖಾನ್, ಅನಿಶ್ ಪಾಠ, ಕೆ.ಎಚ್.ಅನೀಫ್, ಲಿಯಾಕತ್ ಅಲಿ, ಬಾಷಾ ಸಾಬ್, ಆಯೂಬ್ ಖಾನ್, ಶಕೀಲ್ ಅಹಮ್ಮದ್, ಮೈನುದ್ದೀನ್, ಅಬ್ದುಲ್ ಸಮದ್‌, ಕರಿಬಸಪ್ಪ ಇತರರು ಇದ್ದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News