ಭಾರತದ ಚರಿತ್ರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಅನ್ಯಾಯವಾಗಿದೆ: ಪುರುಷೋತ್ತಮ ಬಿಳಿಮಲೆ

Update: 2024-10-15 16:44 GMT

ದಾವಣಗೆರೆ: ಭಾರತದ ಚರಿತ್ರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಅನ್ಯಾಯವಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಹರಿಹರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು. ಪರಸ್ಪರ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಲೇಖಕ ಜೆ.ಕಲೀಂ ಬಾಷಾ ಅವರು ಅನುವಾದಿಸಿರುವ ಕ್ರಾಂತಿಕಾರಿ ಸ್ವಾತಂತ್ರ್ಯ ಹುತಾತ್ಮ ಕವಿ ರಾಮ್‌ ಪ್ರಸಾದ ಬಿಸ್ಮಿಲ್‌ (ಆತ್ಮಕಥೆ) ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಬ್ರಿಟಿಷರು ಮೊಗಲರ ಕೊನೆಯ ದೊರೆಯನ್ನು ಕ್ರೂರವಾಗಿ ಕೊಂದರು. ಇದು ಮುಸ್ಲಿಂ ಸಮುದಾಯಕ್ಕೆ ಬಹಳ ನೋವುಂಟು ಮಾಡಿತು. ಇದರಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿ ತೊಡಗಿಕೊಂಡಿತು. ಅಲ್ಲದೇ ಬ್ರಿಟಿಷರ ಜೊತೆ ಇಂಗ್ಲಿಷ್‌ ಭಾಷೆಯನ್ನು ವಿರೋಧಿಸಿ ತಮ್ಮ ಮಕ್ಕಳನ್ನು ಉರ್ದು ಶಾಲೆಗಳಿಗೆ ಸೇರಿಸಿದರು. ಇದರಿಂದ ಮುಸ್ಲಿಂ ಸಮುದಾಯ ಉನ್ನತ ಹುದ್ದೆಗಳಿಂದ ವಂಚಿತವಾಯಿತು ಎಂದರು.

ತೆರೆಗೆ ಸರಿದ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ 22 ಭಾಷೆಯಲ್ಲಿ ಪುಸ್ತಕಗಳನ್ನು ಹೊರತರುವ ಪ್ರಯತ್ನ ನಡೆಯಿತು. ಆಗ ಕರ್ನಾಟಕದಿಂದ ಒಂದು ಪ್ರಸ್ತಾವವೂ ಸಲ್ಲಿಕೆಯಾಗಲಿಲ್ಲ. 50 ವರ್ಷಗಳ ಹಿಂದೆ ದೇಶದಲ್ಲಿ ಏನು ನಡೆಯಿತು ಎನ್ನುವುದು ಇಂದಿನ ಯುವ ಪೀಳಿಗೆಗೆ ಗೊತ್ತಿಲ್ಲ. ಅದರೆ. ಸಾವಿರಾರು ವರ್ಷದ ಹಿಂದಿನ ಬಗ್ಗೆ ಮಾತನಾಡುತ್ತಾರೆ. ಆದರೆ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಇವರ ಚರಿತ್ರೆ ಬಗ್ಗೆ ಯುವ ಸಮುದಾಯಕ್ಕೆ ಮಾಹಿತಿಯಿಲ್ಲ. ಈ ಬಗ್ಗೆ ಯುವ ಸಮುದಾಯಗಳಿಗೆ ಇಂತಹ ಪುಸ್ತಕಗಳನ್ನು ನೀಡುವ ಅವಶ್ಯಕತೆಯಿದೆ. ಬೌದ್ದಿಕ ಚಿಂತನಾ ಕ್ರಮ ಹುಟ್ಟದ ಹೊರತು ದೇಶದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಹೇಳಿದರು.

ಹರಿಹರದ ಕವಿ, ಲೇಖಕ ಅನುವಾದಕ ಜೆ. ಕಲೀಂ ಬಾಷಾ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ , ಕೃತಿ ಡಾ| ಎ.ಬಿ. ರಾಮ ಚಂದ್ರಪ್ಪ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಮಂಜಣ್ಣ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಹರಿಹರದ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ, ಪ್ರೊ. ಸಿ.ವಿ.ಪಾಟೀಲ್, ಜೆ. ಕಲೀಂಬಾಷಾ, ಎಚ್. ನಿಜಗುಣ, ಜಿ. ಶಂಕರ ಮೂರ್ತಿ, ರಿಯಾಜ್ ಅಹಮ್ಮದ್, ಎಚ್.ಕೆ.ಕೊಟ್ರಪ್ಪ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News