ದಾವಣಗೆರೆ | ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣ: ಏಳು ಆರೋಪಿಗಳ ಬಂಧನ
ದಾವಣಗೆರೆ: ಅಡಿಕೆ ವ್ಯಾಪಾರಿಯನ್ನು ಬೆದರಿಸಿ 17 ಲಕ್ಷ ರೂ.ಗೂ ಅಧಿಕ ಹೆಚ್ಚು ಹಣ ದರೋಡೆ ಮಾಡಿದ್ದ ಅಡಿಕೆ ವ್ಯಾಪಾರದ ಮಧ್ಯವರ್ತಿ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಗಿರಿಯ ಮುಹಮ್ಮದ್ ಇನಾಯತ್ (21), ಉಮರ್ ಫಾರೂಕ್ (20) ಶಹಬುದ್ದೀನ್ ಖಾಝಿ ಅಲಿಯಾಸ್ ಶಾಹಿದ್ ಖಾಝಿ (24) ಹಾಗೂ ಮೈಸೂರಿನ ಸಲ್ಮಾನ್ ಅಹ್ಮದ್ ಖಾನ್ (25), ಖುರಂ ಖಾನ್ (25) ತುಮಕೂರು ಜಿಲ್ಲೆಯ ಸೈಯದ್ ಸೈಫುಲ್ಲಾ ಅಲಿಯಾಸ್ ಸೈಫು(24) ಮೈಸೂರು ನಿವಾಸಿ ಖಾಷಿಫ್ ಅಹ್ಮದ್ (25) ಬಂಧಿತ ಆರೋಪಿಗಳು.
ಬುಳಸಾಗರದ ಅಡಿಕೆ ವ್ಯಾಪಾರಿ ಅಶೋಕ ಎಂಬವರನ್ನು ಆರೋಪಿಗಳು ವಂಚಿಸಿದ್ದರು. ಅಡಿಕೆ ವ್ಯಾಪಾರದ ಮಧ್ಯವರ್ತಿ ಚನ್ನಗಿರಿ ಟೌನ್ ನಿವಾಸಿ ಮುಹಮ್ಮದ್ ಇನಾಯತುಲ್ಲಾ ಎಂಬಾತ ಜೋಳದಾಳ ಮತ್ತು ಕಲ್ಲಾಪುರ ಗ್ರಾಮಗಳಲ್ಲಿ 35 ಚೀಲ ಅಡಿಕೆ ಇದೆ ವ್ಯಾಪಾರ ಮಾಡಿಸಿಕೊಡುವುದಾಗಿ ಅಶೋಕರಿಗೆ ಹೇಳಿದ್ದಾನೆ. ಈ ಮಾತನ್ನು ನಂಬಿದ ಅಶೋಕ 17.24 ಲಕ್ಷ ರೂ.ಗಳನ್ನು ತಗೆದುಕೊಂಡು ಬೊಲೆರೊ ವಾಹನದಲ್ಲಿ ಇನಾಯತ್ ಜೊತೆಗೆ ಜೋಳದಾಳ ಕಡೆಗೆ ಪ್ರಯಾಣ ಹೊರಟಿದ್ದರು. ಭದ್ರಾವತಿ ಕಡೆಗೆ ಹೋಗುವ ಜೋಳದಾಳ ಅರಣ್ಯ ಪ್ರದೇಶದ ರಸ್ತೆಯಲ್ಲಿ ಇನಾಯತ್ ಮೂತ್ರ ವಿಸರ್ಜನೆ ಮಾಡಬೇಕು ವಾಹನ ನಿಲ್ಲಿಸುವಂತೆ ಹೇಳಿದಾಗ ಅಶೋಕ ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿದ್ದಾರೆ. ಈ ವೇಳೆ ಹಿಂದಿನಿಂದ ಕಾರಿನಲ್ಲಿ ಬಂದ 7 ರಿಂದ 8 ಮಂದಿ ಅಪರಿಚಿತರು ಚಾಕು ತೋರಿಸಿ ಅಶೋಕರನ್ನು ಬೆದರಿಸಿ ಅವರ ಬಳಿಯಲ್ಲಿದ್ದ 17,24,000 ರೂ ನಗದು, ಮೊಬೈಲ್ ಮತ್ತು ಗೂಡ್ಸ್ ವಾಹನದ ಕೀಯನ್ನು ದರೋಡೆ ಮಾಡಿರುವುದಾಗಿ ಪೊಲೀಸ್ ದೂರು ನೀಡಲಾಗಿತ್ತು. ಪರಾರಿಯಾಗಿದ್ದರು.
ಇದೀಗ ಪ್ರಕರಣವನ್ನು ಭೇದಿಸಿರುವ ಚನ್ನಗಿರಿ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 7,37,920 ರೂ. ನಗದು ಹಾಗೂ ಈ ಕೃತ್ಯಕ್ಕೆ ಬಳಸಿದ 4 ವಾಹನಗಳು, 9 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.