ಉಡುಪಿ: ಯಕ್ಷಗುರು ತೋನ್ಸೆ ಜಯಂತ್ ಕುಮಾರ್ ನಿಧನ
ಉಡುಪಿ: ಯಕ್ಷಗಾನ ಭಾಗವತ ತೋನ್ಸೆ ಜಯಂತ್ ಕುಮಾರ್(78) ಅವರು ನಿಧನರಾಗಿದ್ದಾರೆ. ಇವರು ರಾಷ್ಟ್ರ ಪ್ರಶಸ್ತಿ ವಿಜೇತ, ಸಂಚಾರಿ ಯಕ್ಷಗಾನ ಭಂಡಾರ ತೋನ್ಸೆ ಕಾಂತಪ್ಪ ಮಾಸ್ಟರ್ ರವರ ಸುಪುತ್ರರಾಗಿದ್ದಾರೆ.
ಯಕ್ಷಗಾನ ಭಾಗವತರಾಗಿ, ಮದ್ದಳೆ, ಚೆಂಡೆಯ ಜೊತೆಗೆ ವೇಷಧಾರಿಯಾಗಿ ಕೂಡಾ ಪಾತ್ರ ಮಾಡಿರುವ ಕೆಲವು ಸಂಘ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿ ರಾಜ್ಯಮಟ್ಟಕ್ಕೆ ಬೆಳೆಸಿದ್ದಾರೆ.
ಯಕ್ಷಗಾನ ಸವ್ಯಸಾಚಿ, ಯಕ್ಷವಾರಿಧಿ, ಕಾಳಿಂಗ ನಾವಡ, ಯಕ್ಷಸುಮ,ಜಾನಪದ ಅಕಾಡೆಮಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಗಳನ್ನು ಪಡೆದಿರುವ ಇವರು ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ರವರಿಂದ ಸನ್ಮಾನಿತರಾಗಿದ್ದಾರೆ.
ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ಪ್ರತಿಭಾನ್ವಿತ ಕಲಾವಿದರಾಗಿ ಸಾಕಷ್ಟು ಸಾಧನೆಗಳೊಂದಿಗೆ ಪ್ರಸಿದ್ದರಾಗಿದ್ದ ತೋನ್ಸೆ ಯಕ್ಷಗಾನದ ಸಾಂಪ್ರದಾಯಿಕ ಮೌಲ್ಯಗಳ ಉಳಿಯುವಿಕೆಗೆ ಸಮಗ್ರವಾಗಿ ಶ್ರಮಿಸಿದ್ದರು.
ಭಾಗವತರೂ ,ಯಕ್ಷಗುರುಗಳೂ ಆದ ತೋನ್ಸೆ ಜಯಂತ ಕುಮಾರ್ ಅವರು 3 ಗಂಡು ಮಕ್ಕಳು ಮತ್ತು ಪತ್ನಿ ವಿನೋದಾ ಅವರನ್ನು ಅಗಲಿದ್ದಾರೆ.
ನಾಳೆ ಸಂತೆಕಟ್ಟೆ ಗೋಪಾಲಪುರದಲ್ಲಿರುವ ಮನೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಸಕಲ ಗೌರವಾರ್ಪಣೆಯೊಂದಿಗೆ ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರವು ನೆರವೇರಲಿದೆ ಎಂದು ಕುಟುಂಬ ಮೂಲದಿಂದ ತಿಳಿದು ಬಂದಿದೆ.