ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ: ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ: ಮಾತೆತ್ತಿದರೆ ಅಹಿಂದ, ದಲಿತ ಪರ ಎನ್ನುವ ಕಾಂಗ್ರೆಸ್ ಸರ್ಕಾರ ಈಗ ಒಬಿಸಿಯಲ್ಲಿ ದಲಿತರಿಗಿದ್ದ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಕೊಡಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಗುರುವಾರ ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಸ್ಲಿಂ ಓಲೈಕೆಗಾಗಿ ದಲಿತರಿಗೆ ಹೀಗೆ ಅನ್ಯಾಯ ಮಾಡುತ್ತಿದ್ದಾರೆ. ಅಂಬೇಡ್ಕರ್, ಬಾಬು ಜಗಜೀವನ ರಾಮ್ ಅವರಿಗೆ ಅವಮಾನ ಮಾಡುವ ಮೂಲಕ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಕರ್ಣಾಟಕ, ತೆಲಂಗಾಣ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಅವರ ಸರ್ಕಾರ ತೇಲಾಡುತ್ತಿದೆ. ದೇಶದ ಜನ ಕಾಂಗ್ರೆಸ್ಸಿಗರ ಡಬಲ್ ಸ್ಟ್ಯಾಂಡ್ ಅನ್ನು ನೋಡಿ ಬಿಟ್ಟಿದ್ದಾರೆ. ಹಾಗಾಗಿ ಈ ಸ್ಥಿತಿಗೆ ತಂದಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನಾಯಕರು ಕರ್ನಾಟಕಕ್ಕೆ ವಸೂಲಿಗೆ ಬರುತ್ತಾರೆ ಅಷ್ಟೇ. ಅವರ ಡಿಎನ್ಎ ಬಗ್ಗೆ ದೇಶದ ಜನಕ್ಕೆ ಗೊತ್ತಿದೆ. ದೇಶದಲ್ಲಿ 230 ಕ್ಷೇತ್ರಗಳಿಗೆ ಸ್ಪರ್ಧಿಸಿದ್ದಾರೆ. ಅಧಿಕಾರಕ್ಕೆ ಬರುವಷ್ಟು ಸ್ಥಾನಗಳಿಗೂ ಸ್ಪರ್ಧಿಸದ ಇವರಿಗೆ ಪ್ರಧಾನಿ ಮೋದಿ, ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ದೇಶದಲ್ಲಿನ ಎಲ್ಲ ಸರ್ವೆಗಳಲ್ಲಿ ಬಿಜೆಪಿ 370, 380 ಗೆಲ್ಲುತ್ತದೆ ಎಂಬ ವರದಿ ಇದೆ. ಆದರೆ, ನಾವು 400 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು.