ಧಾರವಾಡ | ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಅಂಜುಮನ್ ನೇತೃತ್ವದಲ್ಲಿ ಮುಸ್ಲಿಮರ ಪ್ರತಿಭಟನೆ, ಬಂದ್ ಆಚರಣೆ
ಧಾರವಾಡ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಅಂಜುಮನ್ ನೇತೃತ್ವದಲ್ಲಿ ಮುಸ್ಲಿಮರು ಇಂದು(ಎ.22) ಧಾರವಾಡದಲ್ಲಿ ಅರ್ಧ ದಿನ ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಅಂಜುಮನ್ ಸಂಸ್ಥೆ ಕರೆ ಕೊಟ್ಟಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಂದ್ ಮಾಡಿದ ಅಂಗಡಿ - ಮುಂಗಟ್ಟುಗಳ ಮುಂದೆ ನೇಹಾ ಭಾವಚಿತ್ರ ಹಾಕಿ, ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ.
"ಹೆಣ್ಣು ನಮ್ಮ ಅಕ್ಕ, ಹೆಣ್ಣು ನಮ್ಮ ತಾಯಿ, ಹೆಣ್ಣು ನಮ್ಮ ತಂಗಿ, ನೇಹಾ ಕುಟುಂಬಕ್ಕೆ ನ್ಯಾಯ ದೊರಕಬೇಕು. ಹಂತಕ ಫಯಾಝ್ ನಿಗೆ ಉಗ್ರ ಶಿಕ್ಷೆಯಾಗಬೇಕು" ಎಂದು ಫಲಕಗಳನ್ನು ಹಿಡಿದು , ಧಾರವಾಡದ ಅಂಜುಮನ್ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡು ನೇಹಾ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ಹಂತಕ ಫಯಾಝ್ ಪರ ಯಾವ ಮುಸ್ಲಿಂ ವಕೀಲರೂ ವಕಾಲತ್ತು ವಹಿಸಬಾರದು ಎಂದು ಒತ್ತಾಯಿಸಿದ ಅವರು, ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹಿರೇಮಠ ಅವರ ಹೆಸರಿಡುವುದಾಗಿ ಅಂಜುಮನ್ ಸಂಸ್ಥೆ ಸದಸ್ಯರು ಇದೇ ಸಂದರ್ಭದಲ್ಲಿ ತಿಳಿಸಿದರು.