ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ : ವಿಜಯೇಂದ್ರ
ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಮಂಗಳವಾರ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ದೊಡ್ಡ ಸವಾಲು ಎದ್ದಿದೆ. ಈ ನಾಡಿನ ತಾಯಂದಿರು, ಮಹಿಳೆಯರು, ಯುವತಿಯರಿಗೆ ಧೈರ್ಯ ನೀಡುವ ನಿಟ್ಟಿನಲ್ಲಿ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಿಬಿಐ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರಕಾರ ಸಿಐಡಿ ತನಿಖೆಗೆ ಕೊಟ್ಟಿದೆ. ಆದರೆ, ತನಿಖೆ ನಿಧಾನಗತಿಯಲ್ಲಿದೆ. ತಂದೆ-ತಾಯಿಯ ಗೋಳನ್ನು ನೋಡಿದ್ದೇವೆ. ಇನ್ಯಾವುದೇ ಕುಟುಂಬಕ್ಕೂ ಈ ರೀತಿಯ ಪರಿಸ್ಥಿತಿ ಬರಬಾರದು. ಕೊಲೆಗಡುಕರಿಗೆ ಸರಿಯಾದ ಶಿಕ್ಷೆ ಆಗಬೇಕೆಂಬ ಒತ್ತಾಯವನ್ನು ಅವರ ತಂದೆ, ತಾಯಿ ಮಾಡಿದ್ದಾರೆ. ಈ ವಿಷಯದಲ್ಲಿ ನಾವು ರಾಜಕೀಯ ಬೆರೆಸುವ ಪ್ರಶ್ನೆ ಇಲ್ಲ ಎಂದು ಅವರು ಹೇಳಿದರು.