ನೇಹಾ ಹಿರೇಮಠ್ ಕೊಲೆ ಪ್ರಕರಣ : ಸಿಐಡಿ ಪೊಲೀಸರಿಂದ ಮತ್ತಿಬ್ಬರ ವಿಚಾರಣೆ
ಬೆಂಗಳೂರು : ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣದ ಸಂಬಂಧ ಸಿಐಡಿ ಪೊಲೀಸರು, ಹೋಟೆಲ್‍ವೊಂದರ ಮಾಲಕ ಸೇರಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ವರದಿಯಾಗಿದೆ.
ನೇಹಾ ಕೊಲೆ ಸಂಚಿನಲ್ಲಿ ನಾಲ್ವರ ಕೈವಾಡವಿದೆ. ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿಲ್ಲ ಎಂದು ನೇಹಾ ತಂದೆ ನಿರಂಜನ ಹಿರೇಮಠ್ ಆರೋಪಿಸಿದ್ದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮತ್ತಿಬ್ಬರನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆಂದು ಗೊತ್ತಾಗಿದೆ.
ಈಗಾಗಲೇ ಆರೋಪಿಯ ಪೋಷಕರು, ಸ್ನೇಹಿತರು, ಪರಿಚಯಸ್ಥರು ಸೇರಿದಂತೆ ಹಲವರನ್ನು ಸಿಐಡಿ ಪೊಲೀಸರು ಈಗಾಗಲೇ ವಿಚಾರಣೆಗೊಳಪಡಿಸಿದ್ದು, ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ಸಾಕ್ಷಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದು, ಶೀಘ್ರವೇ ವರದಿ ಹೊರಬರಲಿದೆ.
ಎ.18ರಂದು ನೇಹಾ ಕೊಲೆ ನಡೆದಿದ್ದು, ಒಂದು ತಿಂಗಳು ಸಮೀಪಿಸುತ್ತಿದೆ. ಹೀಗಾಗಿ ಅಧಿಕಾರಿಗಳು ಕೂಡ ತ್ವರಿತಗತಿಯಲ್ಲಿ ತನಿಖೆ ಮುಗಿಸಿ ಮಧ್ಯಂತರ ಚಾರ್ಜಾಶೀಟ್ ಸಲ್ಲಿಸುವ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.