ಅಮಿತ್ ಶಾ ಪ್ರಚಾರ ಸಭೆಯ ವೇದಿಕೆಯಲ್ಲಿ ನೇಹಾ ಹಿರೇಮಠ ಕುಟುಂಬ!

Update: 2024-05-01 18:42 GMT

ಹುಬ್ಬಳ್ಳಿ : ನೇಹಾ ಸಾವಿಗೆ ನ್ಯಾಯ ಕೇಳಲು ಅಮಿತ್ ಶಾ ಭೇಟಿ ಮಾಡಿದ ಆಕೆಯ ಪೋಷಕರು, ಅಮಿತ್ ಶಾ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಂತೆ ವೇದಿಕೆಯಲ್ಲಿ ಬಂದು ಕುಳಿತ ಘಟನೆ ಹುಬ್ಬಳ್ಳಿಯಲ್ಲಿ ಬುಧವಾರ ವರದಿಯಾಗಿದೆ.

ಪ್ರಚಾರ ಸಭೆಯ ಆರಂಭಕ್ಕೂ ಮುನ್ನ ಕೆಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಹಾಗು ತಾಯಿ ಮತ್ತು ಸೋದರ ಭೇಟಿಯಾಗಿದ್ದರು. ಕಾರ್ಯಕ್ರಮ ನಡೆಯವ ವೇದಿಕೆಯ ಪಕ್ಕದಲ್ಲಿ ಹಾಕಿದ ವಿಐಪಿ ವಿಶ್ರಾಂತಿ ಟೆಂಟ್ ನಲ್ಲಿ ಭೇಟಿಯಾದ, ನೇಹಾ ಕುಟುಂಬದ ಸದಸ್ಯರು, ನೇಹಾ ಸಾವಿಗೆ ನ್ಯಾಯ ಒದಗಿಸುವಂತೆ ಕೇಳಿದರು.

ಕೆಲ ಹೊತ್ತು ಘಟನೆಯ ಬಗ್ಗೆ ಸಮಾಲೋಚನೆ ನಡೆಸಿ ವೇದಿಕೆಗೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಭಾಷಣ ಆರಂಭಿಸಿದ ನಂತರ ವೇದಿಕೆಯ ಮೇಲೆ ಏಕಾಏಕಿ ನಿರಂಜನ್ ಕುಟುಂಬ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರಾಗಿರುವ ನಿರಂಜನ್ ಬಿಜೆಪಿ ಕಾರ್ಯಕ್ರಮದ ವೇದಿಕೆ ಹಂಚಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿಯ ಪ್ರಚಾರ ಸಭೆಯ ವೇದಿಕೆಯ ಮೇಲೆ ಕುಳಿತುಕೊಳ್ಳಲು ನೇಹಾ ಕುಟಂಬಕ್ಕೆ ಆಸನದ ವ್ಯವಸ್ಥೆ ಮಾಡಿದವರು ಯಾರು?. ಅಷ್ಟೊಂದು ಭದ್ರತೆ ಇರುವ ಕೇಂದ್ರ ಗೃಹ ಸಚಿವರ ಪ್ರಚಾರ ಸಭೆಯ ವೇದಿಕೆಯಲ್ಲಿ ಬೇರೆ ಪಕ್ಷದ ಚುನಾಯಿತ ಪ್ರತಿನಿಧಿಗೆ ಆಹ್ವಾನ ಕೊಟ್ಟವರು ಯಾರು? ಎಂಬ ಪ್ರಶ್ನೆಗಳು ಚರ್ಚೆಯಾಗುತ್ತಿವೆ.

ನೇಹಾಳ ಸಾವಿಗೆ ನ್ಯಾಯ ಕೇಳಲು ಬಂದವರನ್ನು ಝೆಡ್ ಪ್ಲಸ್ ಭದ್ರತೆಯಿರುವ ಕೇಂದ್ರ ಗೃಹ ಸಚಿವರ ಕಾರ್ಯಕ್ರಮದ ವೇದಿಕೆಯ ಮೇಲೆ‌ ಹತ್ತಲು ಅನುಮತಿ ಕೊಟ್ಟವರು ಯಾರು? ಇದು ಮೊದಲೇ ನಿರ್ಧರಿಸಿ ಆಹ್ವಾನ ನೀಡಲಾಗಿತ್ತೆ ? ವೇದಿಕೆ ಮೇಲೆ ಇರುವವರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗಿತ್ತೆ ? ಅಥವಾ ಕೊನೆ ಕ್ಷಣದಲ್ಲಿ ಅವರು ವೇದಿಕೆಗೆ ಬಂದರೆ ? ಹಾಗಿದ್ದರೆ ಅವರಿಗೆ ವೇದಿಕೆ ಏರಲು ಅನುಮತಿ ಸಿಕ್ಕಿದ್ದು ಹೇಗೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚೆರ್ಚೆಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News