ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ | ಆರೋಪ ಕೇಳಿ ಬಂದ ತಕ್ಷಣವೇ ರಾಜ್ಯ ಪೊಲೀಸರು ಎಫ್ಐಆರ್ ಹಾಕಬೇಕಿತ್ತು:‌ ಪ್ರಲ್ಹಾದ್ ಜೋಶಿ

Update: 2024-04-30 12:40 IST
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ | ಆರೋಪ ಕೇಳಿ ಬಂದ ತಕ್ಷಣವೇ ರಾಜ್ಯ ಪೊಲೀಸರು ಎಫ್ಐಆರ್ ಹಾಕಬೇಕಿತ್ತು:‌ ಪ್ರಲ್ಹಾದ್ ಜೋಶಿ

Photo:fb/prahladjoshi

  • whatsapp icon

ಹುಬ್ಬಳ್ಳಿ: ರೇವಣ್ಣ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದವಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಕೇಂದ್ರದ ಮೇಲೆ ಹಾಕಲು ನೋಡುತ್ತಿದೆ. ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಮಂಗಳವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿ ಆರೋಪ ಮಾಡುತ್ತಿದೆ ಎಂದ ಜೋಶಿ ಅವರು, ಪ್ರಜ್ವಲ್ ಎಫ್‌ ಐಆರ್ ಆಗುವ ಮೊದಲೇ ಹೋಗಿದ್ದಾರೆ.  ಆತನ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ತಕ್ಷಣವೇ ರಾಜ್ಯ ಪೊಲೀಸರು ಎಫ್ಐಆರ್ ಹಾಕಬೇಕಿತ್ತು. ಹೋಗಲು ಏಕೆ ಬಿಟ್ಟರು? ಪ್ರಜ್ವಲ್ ವಿದೇಶಕ್ಕೆ ಹಾರುತ್ತಾರೆಂಬುದು ಕೇಂದ್ರಕ್ಕೆ ಕನಸು ಬೀಳುತ್ತದೆಯೇ? ಎಂದು ಪ್ರಶ್ನಿಸಿದರು.

ಜೆಡಿಎಸ್ ಒಂದು ಸ್ವತಂತ್ರ ಪಕ್ಷ. ಆಗಲೇ ಪ್ರಜ್ವಲ್ ಅವರನ್ನು ಉಚ್ಚಾಟಿಸಲು ತೀರ್ಮಾನಿಸಿದ್ದು, ಆ ಪಕ್ಷ ಕೈಗೊಂಡಿರುವ ಕ್ರಮಕ್ಕೆ ಬಿಜಿಪಿಯ ವಿರೋಧವಿಲ್ಲ. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಆಗಲೇ "ಉಪ್ಪು ತಿಂದವರು ನೀರು ಕುಡಿಯಬೇಕು" ಎಂದು ಹೇಳಿದ್ದಾರೆ. ಜೆಡಿಎಸ್ ಆಗಲಿ, ಬಿಜೆಪಿಯಾಗಲಿ ಪ್ರಜ್ವಲ್ ಉಚ್ಚಾಟನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಎಂಬ ಕಾರಣಕ್ಕೆ ಪ್ರಕರಣ ಸೆನ್ಸಿಟಿವ್ ಆಗಿದೆ. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ ಎಂದು ಜೋಶಿ ಸ್ಪಷ್ಟಪಡಿಸಿದರು.

ಪ್ರಜ್ವಲ್ ತಲೆ ಮರೆಸಿಕೊಳ್ಳಲು ಬಿಜೆಪಿ ಸಹಾಯ ಮಾಡಿದೆ ಎಂಬ ಆರೋಪ ಕಾಂಗ್ರೆಸ್ಸಿನ ಬೇಜವಾಬ್ದಾರಿತನದ್ದು. ಯಾರೇ ಆಗಲಿ ಆರೋಪ ಮಾಡುವಾಗ ಬುದ್ಧಿ, ಜ್ಞಾನ ಇಟ್ಟುಕೊಳ್ಳಬೇಕು. ದುರುದ್ದೇಶದಿಂದ ಕೂಡಿರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.


 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News