ಫ್ರಾನ್ಸ್ : ಹೊಸ ಸರ್ಕಾರ ಅನಾವರಣಗೊಳಿಸಿದ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್

Update: 2024-09-22 03:00 GMT

ಇಮ್ಯಾನ್ಯುವೆಲ್ ಮ್ಯಾಕ್ರೋನ್  PC: x.com/wizfun 

ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್  ಅವರು ಶನಿವಾರ ಹೊಸ ಸರ್ಕಾರವನ್ನು ಅನಾವರಣಗೊಳಿಸಿದ್ದಾರೆ. ಫ್ರಾನ್ಸ್ ಸಂಸತ್ತಿಗೆ ಎರಡು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಅತಂತ್ರ ಸಂಸತ್ ನಿರ್ಮಾಣವಾದ ಹಿನ್ನೆಲೆಯಲ್ಲಿ, ರಾಜಕೀಯ ವಿಭಜನೆ, ಆರ್ಥಿಕ ಹಾಗೂ ರಾಜತಾಂತ್ರಿಕ ಸವಾಲುಗಳ ನಡುವೆ ಕೇಂದ್ರ-ಬಲಪಂಥೀಯ ಸರ್ಕಾರವನ್ನು ಅಧ್ಯಕ್ಷರು ರಚಿಸಿದ್ದಾರೆ.

ಕನ್ಸರ್ವೇಟಿವ್ ಪ್ರಧಾನಿ ಮೈಕೆಲ್ ಬರ್ನೀರ್ ಅವರು ಹಲವು ವಾರಗಳ ಸಂಧಾನ ಬಳಿಕ ರಚಿಸಿರುವ ಸರ್ಕಾರವನ್ನು ಅಧ್ಯಕ್ಷರು ಅನುಮೋದಿಸಿದ್ದಾರೆ. ಹೊಸ ಸರ್ಕಾರವನ್ನು ಅಧ್ಯಕ್ಷೀಯ ಅರಮನೆ ಶನಿವಾರ ಘೋಷಿಸಿದೆ.

ಕಳೆದ ಜೂನ್- ಜುಲೈ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಎಡಪಂಥೀಯ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆದ್ದರೂ, ಬಹುಮತ ಸಾಧ್ಯವಾಗಿರಲಿಲ್ಲ. ಶನಿವಾರ 38 ಮಂದಿಯ ಸಂಪುಟವನ್ನು ಘೋಷಿಸಲಾಗಿದ್ದು, ಇವರಲ್ಲಿ ಬಹುತೇಕ ಮಂದಿ ಮ್ಯಾಕ್ರೋನ್ ಅವರ ಕೇಂದ್ರೀಯ ಮೈತ್ರಿಕೂಟ ಹಾಗೂ ಕನ್ಸರ್ವೇಟಿವ್ ರಿಪಬ್ಲಿಕನ್ ಪಕ್ಷದವರು.

ಯೂರೋಪಿಯನ್ ವ್ಯವಹಾರಗಳ ಡಿಜಿಟಲ್ ರೂಪಾಂತರದ ನಿಟ್ಟಿನಲ್ಲಿ ಅಪಾರವಾಗಿ ಶ್ರಮಿಸಿರುವ ಜೇನ್ ನೊವೆಲ್ ಬ್ಯಾರಟ್ ನೂತನ ವಿದೇಶಾಂಗ ಸಚಿವರಾಗಿದ್ದಾರೆ. ಯೂರೋಪಿಯನ್ ಒಕ್ಕೂಟದಲ್ಲಿ ಹಲವು ಸಂಕೀರ್ಣ ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಿದ ಅನುಭವವನ್ನು ಅವರು ಹೊಂದಿದ್ದಾರೆ.

ಹೊಸ ಹಣಕಾಸು ಸಚಿವರಾದ ಆಂಟೋನಿ ಅರ್ಮಂಡ್ ಅವರು ಉದಯೋನ್ಮುಖ ನಾಯಕರಾಗಿದ್ದು, ಫ್ರಾನ್ಸ್ನ ವಿತ್ತೀಯ ನೀತಿಗಳನ್ನು ರೂಪಿಸುವ ಹೊಣೆ ಹೊತ್ತಿದ್ದಾರೆ. ಫ್ರಾನ್ಸ್ ದೊಡ್ಡ ಸಾಲದ ಹೊರೆಯನ್ನು ಹೊಂದಿರುವ ನಡುವೆ ಇವರು 2025ರ ಸವಾಲುದಾಯಕ ಬಜೆಟ್ ಸಿದ್ಧಪಡಿಸಬೇಕಿದೆ.

ರಕ್ಷಣಾ ಸಚಿವ ಹುದ್ದೆಯನ್ನು ಸೆಬಾಸ್ಟಿಯನ್ ಲೆಕೊರ್ನು ಉಳಿಸಿಕೊಂಡಿದ್ದಾರೆ. ಉಕ್ರೇನ್ ಗೆ ಮಿಲಿಟರಿ ನೆರವು ನೀಡುವುದು, ರಕ್ಷಣಾ ವ್ಯವಸ್ಥೆಯ ಆಧುನೀಕರಣದ ಜತೆಗೆ ಸೇನೆಯ ಸಾಮರ್ಥ್ಯ ವೃದ್ಧಿಯ ಸವಾಲು ಅವರ ಮುಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News