ಗದಗ: ಜಾನುವಾರು ಸಂತೆಗೆ ದನಗಳನ್ನು ಕೊಂಡೊಯ್ಯುತ್ತಿದ್ದ ಇಬ್ಬರ ಮೇಲೆ ಸಂಘ ಪರಿವಾರದಿಂದ ಮಾರಣಾಂತಿಕ ಹಲ್ಲೆ

Update: 2023-09-10 06:05 GMT

ಗದಗ, ಸೆ.10: ಜಾನುವಾರು ಸಂತೆಗೆ ದನಗಳನ್ನು ಕೊಂಡೊಯ್ಯುತ್ತಿದ್ದ ಇಬ್ಬರ ಮೇಲೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ನರಗುಂದ ಪಟ್ಟಣದ ಹೊರವಲಯದ ಕುರ್ಲಗೇರಿ ರಸ್ತೆಯಲ್ಲಿ ಶನಿವಾರ ಮುಸ್ಸಂಜೆ ನಡೆದಿರುವುದು ವರದಿಯಾಗಿದೆ.

ಮುಹಮ್ಮದ್ ಬೇಪಾರಿ ಮತ್ತು ಅಸ್ತಾಫ್ ಬೇಪಾರಿ ಹಲ್ಲೆಗೊಳಗಾದವರು. ಇವರು ಶನಿವಾರ  ಜಾನುವಾರು ಸಂತೆಗೆಂದು ವಾಹನದಲ್ಲಿ ಗೋವುಗಳನ್ನು ಕೊಂಡೊಯ್ದಿದ್ದರು. ಆದರೆ ಗೋವುಗಳು ಮಾರಾಟ ಆಗದ ಕಾರಣ ಸಂಜೆ ಅವುಗಳನ್ನು ವಾಪಸ್ ನರಗುಂದಕ್ಕೆ ತರುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ. 7-8 ಮಂದಿಯ ತಂಡ ಇವರ ವಾಹನವನ್ನು ತಡೆದು 'ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದೀರಿ' ಎಂದು ಆರೋಪಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ನರಗುಂದದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News