ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ-ಬೆಟಗೇರಿ ಬಂದ್
ಗದಗ : ಸಂಸತ್ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಇಂದು(ಮಂಗಳವಾರ) ಗದಗ-ಬೆಟಗೇರಿ ಅವಳಿ ನಗರ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್‌ಗೆ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.
ನಗರದ ಮುಳಗುಂದ ನಾಕಾದಲ್ಲಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ನಡೆಸಲಾಗಿದೆ. ಈ ಹಿನ್ನಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸರಕಾರಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಬಂದ್ ಕರೆಗೆ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕೂಡ ಬೆಂಬಲ ನೀಡಿದೆ.
ನಗರದಲ್ಲಿ ಬೆಳಿಗ್ಗೆ ಬಸ್ ಸಂಚಾರಕ್ಕೆ ಅಣಿಯಾಗುತ್ತಿದ್ದ ಸಿಬ್ಬಂದಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿದ್ದಾರೆ. ನಗರದ ಮುಳಗುಂದ ನಾಕಾ ಬಳಿಯ ಬಸ್ ಡೀಪೋಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾದರು. ಅಲ್ಲದೆ, ಸಂಚಾರ ಸಂಪೂರ್ಣ ಸ್ತಬ್ಧ ಮಾಡುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಅಂಗಡಿ ಬಂದ್ ಮಾಡುವಂತೆ ಮನವಿ ಮಾಡಿಕೊಂಡರು. ಪ್ರತಿಭಟನಾನಿರತರು ಮೆರವಣಿಗೆ ಹೊರಡುತ್ತಿದ್ದಂತೆ ಹಲವರು ಅಂಗಡಿ ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದರು. ಇತ್ತ ಬೇಟಗೇರಿಯಲ್ಲಿಯೂ ಸಹ ಅಂಗಡಿ, ತರಕಾರಿ ಮಾರುಕಟ್ಟೆ ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು.