ವಿಮಾನಯಾನಿಗೆ ಸಹ ಪ್ರಯಾಣಿಕನಿಂದ ಕಿರುಕುಳ: ದೂರು ನೀಡದಂತೆ ತಡೆದ ಸಿಬ್ಬಂದಿ
ಕೊಲ್ಕತ್ತಾ: ತನ್ನ ಸಂಬಂಧಿಕರೊಂದಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ವೇಳೆ ಸಹ ಪ್ರಯಾಣಿಕ ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಲು ಮುಂದಾದ 28 ವರ್ಷದ ಮಹಿಳೆಯನ್ನು ವಿಮಾನ ಸಿಬ್ಬಂದಿ ಹಾಗೂ ಸಿಐಎಸ್ಎಫ್ ಸಿಬ್ಬಂದಿ ತಡೆದಿದ್ದಾರೆ ಎಂದು ಆಪಾದಿಸಲಾಗಿದೆ.
ಸಹಪ್ರಯಾಣಿಕ ಅಸಭ್ಯವಾಗಿ ಸ್ಪರ್ಶಿಸಿರುವುದನ್ನು ಸಿಬ್ಬಂದಿ ಹಾಗೂ ಸಿಐಎಸ್ಎಫ್ ಅಧಿಕಾರಿಗಳು ಒಪ್ಪಿಕೊಂಡರೂ, ಯಾವುದೇ ಪುರಾವೆ ಇಲ್ಲದ ಹಿನ್ನೆಲೆಯಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದರು ಎನ್ನಲಾಗಿದೆ. ಮೌಖಿಕವಾಗಿ ಮಹಿಳೆ ಈ ಆರೋಪ ಮಾಡಿದ್ದು, ಸಹ ಪ್ರಯಾಣಿಕ ಆಕೆಯ ಕ್ಷಮೆ ಯಾಚಿಸುವಂತೆ ಸೂಚಿಸಿದರು ಎಂದು ದೂರಲಾಗಿದೆ.
ಈ ಪರಿಸ್ಥಿತಿಯನ್ನು ನಿಭಾಯಿಸಲು ವಿಮಾನದ ಸಿಬ್ಬಂದಿ ಪ್ರಾಮಾಣಿಕವಾಗಿ ಮಧ್ಯಪ್ರವೇಶಿಸಿದರು ಎಂದು ವಿಮಾನಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಗೆ ಸಜ್ಜಾಗುತ್ತಿದ್ದ ಈ ಮಹಿಳೆ ಸ್ಪೈಸ್ ಜೆಟ್ ಎಸ್ಜಿ-592 ವಿಮಾನದಲ್ಲಿ ಜನವರಿ 31ರಂದು ಪ್ರಯಾಣಿಸಿದ್ದರು. ಇವರಿಗೆ ಮೂಲವಾಗಿ ಹಂಚಿಕೆ ಮಾಡಲಾದ ಆಸನ ಈಕೆಯ ಸ್ನೇಹಿತನಿಗೆ, ತಾಯಿ ಹಾಗೂ ಅಸ್ವಸ್ಥ ತಂದೆಗೆ ಹಂಚಿಕೆಯಾಗಿದ್ದ ಆಸನಕ್ಕಿಂತ ಮೂರು ಸಾಲು ಹಿಂದೆ ಇತ್ತು. ಇವರ ಆಸನದ ಎದುರು ಸಾಲಿನಲ್ಲಿ ಕುಳಿದಿದ್ದ ತಾಯಿ, ತನ್ನದೇ ಸಾಲಿಗೆ ಬರುವಂತೆ ಮಹಿಳೆಗೆ ಸಲಹೆ ಮಾಡಿದ್ದಾರೆ. ಈ ಸಾಲಿನ ಮೂರು ಆಸನಗಳ ಪೈಕಿ ಒಂದು ಮಾತ್ರ ಭರ್ತಿಯಾಗಿತ್ತು. ಕೊಲ್ಕತ್ತಾ ಲಾ ಸ್ಕೂಲ್ ನ ಐದನೇ ವರ್ಷದ ಎಲ್ಎಲ್ ಬಿ ವಿದ್ಯಾರ್ಥಿ ಮಹಿಳೆಗೆ ಬದಿಯ ಆಸನ ಬಿಟ್ಟುಕೊಡಲು ಒಪ್ಪಿಕೊಂಡ. ಆದರೆ ಕಿಟಕಿ ಬದಿಯ ಆಸನಕ್ಕೆ ಹೋಗದೇ ಮಹಿಳೆಯ ಪಕ್ಕದ ಆಸನದಲ್ಲೇ ಕುಳಿತ ಎಂದು ಹೇಳಲಾಗಿದೆ.
ವಿಮಾನ ಟೇಕಾಫ್ ಆದ ಬಳಿಕ ಯುವಕ, ಸಂಗೀತ ಆಲಿಸುತ್ತಿದ್ದ ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ ಎಂದು ಆಪಾದಿಸಲಾಗಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿ ನಿತಂಬವನ್ನೂ ಸ್ಪರ್ಶಿಸಿದ ಎಂದು ಮಹಿಳೆ ದೂರಿದ್ದಾರೆ. ಆಗ ಮಹಿಳೆ ಕೂಗಿಕೊಂಡಿದ್ದು, ಗಗನಸಖಿ ಬಂದು ವಿಚಾರಣೆ ನಡೆಸಿದ್ದಾರೆ. ಸಹಪ್ರಯಾಣಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದಾಗ, ಸಹಪ್ರಯಾಣಿಕ ಕ್ಷಮೆ ಯಾಚಿಸಿದ. ಈ ವೇಳೆ ಸಿಟ್ಟಿನಿಂದ ಮಹಿಳೆ ಆತನಿಗೆ ಹೊಡೆದಿದ್ದಾಳೆ. ಆಗ ಗಗನಸಖಿ ಮಹಿಳೆಯನ್ನು ಕುರಿತು ಹಾಗೆ ಮಾಡಬಾರದಿತ್ತು ಎಂದು ಹೇಳಿ ಆಸನ ಬದಲಾಯಿಸುವಂತೆ ಕೇಳಿದ್ದಾಳೆ. ಆಗ ಯುವಕ ಬೇರೆ ಆಸನಕ್ಕೆ ತೆರಳಿದ್ದಾನೆ ಎನ್ನಲಾಗಿದೆ.
ಆತನ ವಿರುದ್ಧ ಕ್ರಮಕ್ಕೆ ಮಹಿಳೆ ಆಗ್ರಹಿಸಿದರೂ ವಿಮಾನ ಇಳಿದ ಬಳಿಕ ವಿಮಾನ ಸಿಬ್ಬಂದಿ ಹಾಗೂ ಸಿಐಎಸ್ಎಫ್ ಸಿಬ್ಬಂದಿ ಬದಿಗೆ ಕರೆದೊಯ್ದು, ಆತ ವಿದ್ಯಾರ್ಥಿಯಾಗಿರುವುದರಿಂದ ಬಿಟ್ಟುಬಿಡಿ. ದೂರು ನೀಡಿದರೆ ಸುಧೀರ್ಘ ಕಾನೂನು ಸಮರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಕ್ಷಮೆಯಾಚನೆ ಮಾಡಿಸಿಕೊಂಡು ಆತನನ್ನು ಬಿಟ್ಟಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.