ʼಗ್ಯಾರಂಟಿʼ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ಜನದ್ರೋಹಿಗಳು : ಸಿಎಂ ಸಿದ್ದರಾಮಯ್ಯ
ಹಾಸನ: "ನಮ್ಮ ಸರಕಾರದ ಐದು ಗ್ಯಾರಂಟಿಗಳನ್ನು ಪಡೆದಿರುವುದಕ್ಕೆ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ಪರಮ ಜನದ್ರೋಹಿಗಳು. ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಹಾಸನದಲ್ಲಿ ನಡೆದ ಬೃಹತ್ ಜನಕಲ್ಯಾಣೋತ್ಸವ ಸಮಾವೇಶವದಲ್ಲಿ ಮಾತನಾಡಿದರು.
ಡಾ.ರಾಜ್ ಅವರು ಅಭಿಮಾನಿ ದೇವರು ಎಂದು ಹೇಳುತ್ತಿದ್ದರು. ನಮಗೆ ಮತದಾರರ ಬಂಧುಗಳೇ ದೇವರು. ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಆಶೀರ್ವದಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು.
ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣದಲ್ಲಿ , ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗನನ್ನು ಈಗ್ಗಾಂವಿಯಲ್ಲಿ ಜನ ಸೋಲಿಸಿ ನಮಗೆ ಆಶೀರ್ವದಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವಷ್ಟು ಬಹುಮತ ಈ ರಾಜ್ಯದ ಜನರೆ ಯಾವತ್ತೂ ಕೊಟ್ಟಿಲ್ಲ. ಒಮ್ಮೆ ಕಾಂಗ್ರೆಸ್ ಬೆಂಬಲದಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲದಲ್ಲಿ ಮುಖ್ಯಮಂತ್ರಿ ಆದರು. ಬಳಿಕ ಎರಡೂ ಪಕ್ಷಗಳಿಗೆ ವಂಚಿಸಿದರು ಎಂದು ಹೇಳಿದರು.
ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ :
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸುಭದ್ರ ಸರಕಾರ ಕೊಟ್ಟಿದೆ. ಮಾತ್ರವಲ್ಲ ಕಾಂಗ್ರೆಸ್ ಸರಕಾರ ಬಂದಾಗಲೆಲ್ಲಾ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 2013 ರಲ್ಲಿ ಕೊಟ್ಟ ಮಾತಿನಂತೆ ಹಲವಾರು ಭಾಗ್ಯಗಳನ್ನು ಜಾರಿ ಮಾಡಿದೆವು. ಈ ಬಾರಿ ಐದಕ್ಕೆ ಐದೂ ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನೂ ಈಡೇರಿಸುತ್ತಿದ್ದೇವೆ ಎಂದರು.
ನಾವು ಐದು ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಈ ಐದು ಗ್ಯಾರಂಟಿಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ದೊಡ್ಡ ಜನದ್ರೋಹಿಗಳು ಎಂದರು.
ಮೇಕೆದಾಟು ವಿಚಾರದಲ್ಲಿ ಮೌನ ಏಕೆ :
ಕೇಂದ್ರದಲ್ಲಿ ಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ? ಬೆಂಗಳೂತಿನ ಜನತೆಗೆ ನೀರು ಬೇಕಾಗಿದೆ. ಕೊಡಿಸಲಿ ಎಂದು ಸವಾಲು ಹಾಕಿದರು.
ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು. ಅವರು ಅಷ್ಟೆ ಘನತೆಯಿಂದ ಮಾತಾಡಬೇಕಿತ್ತು. ಯಾವತ್ತೂ ಗರ್ವ ತೋರಿಸದ ನನಗೆ, "ಸಿದ್ದರಾಮಯ್ಯ ಅವರ ಗರ್ವಭಂಗ ಮಾಡ್ತೀನಿ" ಎಂದರು. ಇದನ್ನು ನೀವು ಒಪ್ಪಿಕೊಳ್ಳುತ್ತೀರಾ, ಸಹಿಸುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜನತೆ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಕೂಗಿದರು.
ದೇವೇಗೌಡ ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡ, ವೈ.ಕೆ.ರಾಮಯ್ಯ, ಬೈರೇಗೌಡ, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಸಾಕಷ್ಟು ಮಂದಿ ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ. ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆಮೇಲೆ ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು ಎಂದು ಸಿದ್ದರಾಮಯ್ಯ ತಿಳಿಸಿದರು.
ರೈತರ ಮಗ ಏಕೆ ಪ್ರಶ್ನಿಸುತ್ತಿಲ್ಲ: "ಕೇಂದ್ರ ಸರಕಾರ ರಾಜ್ಯದ ರೈತರ ಪಾಲಿನ ಸಾಲದಲ್ಲಿ ಶೇ.58ರಷ್ಟನ್ನು ಕಡಿತಗೊಳಿಸಿದೆ. ಇದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮಗ ಎಂದುಕೊಂಡಿರುವ ಕುಮಾರಸ್ವಾಮಿ ಏಕೆ ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿಲ್ಲ. ನಬಾರ್ಡ್ನಿಂದ ಆಗಿರುವ ಅನ್ಯಾಯವನ್ನು ಕುಮಾರಸ್ವಾಮಿ ಏಕೆ ಸರಿಪಡಿಸುತ್ತಿಲ್ಲ? ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ 11 ಸಾವಿರ ಕೋಟಿ ರೂ.ಯನ್ನು ರಾಜ್ಯಕ್ಕೆ ಕೊಡಿಸಲು ಬಿಜೆಪಿ-ಜೆಡಿಎಸ್ ಏಕೆ ಬಾಯಿ ಬಿಡುತ್ತಿಲ್ಲ"
ಸಿದ್ದರಾಮಯ್ಯ, ಮುಖ್ಯಮಂತ್ರಿ