ಹಾಸನ: ರೇವಣ್ಣ ಕುಟುಂಬದ ವಿರುದ್ದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ
ಹಾಸನ: ಹೊಳೆನರಸೀಪುರ ತಾಲೂಕು ಕಡುವಿನಕೋಟೆ ಗ್ರಾಮದ, ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಎಂಬುವರ ಪತ್ನಿ ಶಿಲ್ಪಾ ಅವರು ಪೊಲೀಸ್ ಇಲಾಖೆಗೆ ನೀಡಿರುವ ದೂರಿನ ಅನ್ವಯ ನ್ಯಾಯಯುತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರ ನೇತೃತ್ವ ದಲ್ಲಿ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಎನ್.ಆರ್.ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಮಂದಿ, ಶಿಲ್ಪಾ ದಂಪತಿ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿ ಗರ್ಭಿಣಿ ಶಿಲ್ಪಾ ಅವರ ಹೊಟ್ಟೆಗೆ ಒದ್ದು ಗರ್ಭಪಾತಕ್ಕೆ ಕಾರಣರಾಗಿರುವವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾನವ ಸರಪಳಿ ರಚಿಸಿದ ಪ್ರತಿಭಟನಕಾರರು ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿ, ರೈತಸಂಘ, ಕನ್ನಡ ಪರ ಸಂಘಟನೆ ಮುಖಂಡರು ಹಾಗೂ ಮಹಿಳೆಯರು ಖಂಡನಾ ವಾಕ್ಯ ಹೊತ್ತ ನಾಮಫಲಕ ಪ್ರದರ್ಶಿಸಿ ಧಿಕ್ಕಾರ ಕೂಗಿದರು.
ನಂತರ ಎನ್.ಆರ್.ವೃತ್ತದಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ಸಾಗಿ, ಡಿಸಿ ಕಚೇರಿ ಎದುರು ಕೆಲ ಹೊತ್ತು ಧರಣಿ ನಡೆಸಿ, ಈ ಬಗ್ಗೆ ರಾಜ್ಯ ಸರ್ಕಾರ ಇಡೀ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಎ.ಟಿ.ರಾಮ ಸ್ವಾಮಿ, ಹಾಸನದಲ್ಲಿ ಪ್ರಜಾಪ್ರಭುತ್ವ ಇಲ್ಲ, ಕುಟುಂಬ ಪ್ರಭುತ್ವ ಇದೆ. ಅದಕ್ಕಾಗಿಯೇ ಇಂಥ ಹೇಯ ಕೃತ್ಯಗಳು ನಡೆಯುತ್ತಿವೆ. ಗರ್ಭಪಾತದಂತಹ ಪಾಪಕೃತ್ಯ ನಡೆಸಿರುವುದು ತಲೆ ತಗ್ಗಿಸುವ ವಿಚಾರ ಎಂದು ವಿಷಾದಿಸಿದರು.
ಬ್ಲಾಕ್ ಮೇಲ್ ಮೂಲಕ ಹದಿಮೂರೂವರೆ ಎಕರೆ ಜಮೀನನ್ನು ಬೇರೊಬ್ಬರ ಹೆಸರಿಗೆ ಕ್ರಯ ಮಾಡಿಸಿದ್ದಾರೆ. ಪ್ರಜಾಪ್ರಭುತ್ವ ಸಂವಿಧಾನದ ಆಶಯದಂತೆ ಬಡವರ ರಕ್ಷಣೆಗಾಗಿ ನಿಲ್ಲಬೇಕಿದ್ದ ಪೊಲೀಸರೂ, ದೊಡ್ಡವರ ಪರ ನಿಂತಿರುವುದು ಬೇಸರದ ಸಂಗತಿ ಎಂದರು.
ಇದೇ ವೇಳೆ ಕಾರಿಗೆ ಬೈಕ್ ಡಿಕ್ಕಿ ಹೊಡೆಯಿತು ಎಂబ ಕಾರಣಕ್ಕೆ ದೊಡ್ಡ ರಂಪಾಟ ಮಾಡಿದ್ದ ಭವಾನಿ ರೇವಣ್ಣ ಅವರಿದ್ದ ಕಾರು ಕಿರಣ್ ರೆಡ್ಡಿ ಅವರದು. ಅವರ ಹೆಸರಿಗೇ ಹದಿಮೂರೂವರೆ ಎಕರೆ ಭೂಮಿಯನ್ನು ಕ್ರಯ ಮಾಡಿಸಲು ಕೊಡಬಾರದ ಕಾಟ ಕೊಟ್ಟಿದ್ದಾರೆ. ಇವರಿಗೆ ಪೊಲೀಸರೂ ಬೆಂಬಲವಾಗಿ ನಿಂತಿದ್ದು ಖಂಡನೀಯ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.