ಹಾಸನ | ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳಿಂದ ರಾಷ್ಟ್ರೀಯ ಹೆದ್ದಾರಿ ತಡೆ
ಹಾಸನ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹಾಸನದ ಭುವನಹಳ್ಳಿ ಬೈಪಾಸ್ ಬಳಿ ವಿವಿಧ ದಲಿತ ಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ತಡೆಗೂ ಮುನ್ನ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಧರ್ಮೇಶ್ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸಂಸತ್‌ನಲ್ಲಿ ವ್ಯಂಗ್ಯವಾಗಿ ಮಾತನಾಡಿ ಅಂಬೇಡ್ಕರ್‌ಗೆ ಅಮಿತ್ ಶಾ ಅಪಮಾನ ಮಾಡಿ ಸಂವಿಧನಾನಕ್ಕೆ ಅಗೌರವ ತೋರಿಸಿರುವ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಮಾತನಾಡಿ ಅಂಬೇಡ್ಕರ್ ಅವರ ಬಗ್ಗೆ ಯಾರೇ ನಾಲಿಗೆ ಹರಿಬಿಡುವವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಎಚ್ಚರಿಕೆ ನೀಡಿದ ಅವರು, ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹಾಸನ್ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಎಚ್.ಕೆ.ಸಂದೇಶ್, ಸಿಐಟಿಯು ಧರ್ಮೇಶ್,ಜಗದೀಶ್, ಎಂ.ಸೋಮಶೇಖರ್, ದಂಡೋರ ವಿಜಯ್ ಕುಮಾರ್, ಅಂಬುಗ ಮಲ್ಲೇಶ್, ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಮಲ್ಲಿಗೆವಾಳು ದೇವಪ್ಪ, ಅಬ್ದುಲ್ ಸಮದ್, ದೇವರಾಜ್, ಈರೇಶ್ ಈರೆಹಳ್ಳಿ, ಕೃಷ್ಣದಾಸ್, ವಿಠಲ್, ರಾಜೇಶ್, ಪೃಥ್ವಿ, ನವೀನ್, ಅರವಿಂದ್, ಇರ್ಷಾದ್, ಕುಮಾರಸ್ವಾಮಿ, ಇತರರು ಇದ್ದರು.