ಚನ್ನರಾಯಪಟ್ಟಣ | ಜಮೀನು ವಿವಾದ; ನಡುರಸ್ತೆಯಲ್ಲೇ ಬಡಿದಾಡಿಕೊಂಡ ಎರಡು ಕುಟುಂಬ
ಚನ್ನರಾಯಪಟ್ಟಣ : ಜಮೀನು ವಿವಾದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಎರಡು ಕುಟುಂಬಗಳು ಸೋಮವಾರ ಬೆಳಗ್ಗೆ ನಡುರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಬಡಿದಾಡಿಕೊಂಡಿರುವ ಘಟನೆ ಪಟ್ಟಣದ ಕೋರ್ಟ್ ಮುಂಭಾಗ ನಡೆದಿದೆ.
ತಾಲೂಕಿನ ಅಂಕನಹಳ್ಳಿ ಗ್ರಾಮದ ದಿನೇಶ್ ಹಾಗೂ ಮಂಜುನಾಥ್ ಎಂಬುವವರ ನಡುವೆ ಜಮೀನು ಸಂಬಂಧ ವ್ಯಾಜ್ಯ ನಡೆಯುತ್ತಿದ್ದು, ಸೋಮವಾರ ಬೆಳಗ್ಗೆ ಕೋರ್ಟ್ ಇದ್ದುದ್ದರಿಂದ ಎರಡೂ ಕುಟುಂಬದವರು ಆಗಮಿಸಿದ್ದರು.
ಈ ವೇಳೆ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಕಡೆಗೆ ನಡು ರಸ್ತೆಯಲ್ಲಿ ಬಡಿದಾಡಿಕೊಂಡರು. ಈ ನಡುವೆ ಗಲಾಟೆಯನ್ನೇ ನೆಪ ಮಾಡಿಕೊಂಡ ಕೆಲವರು, ಮಾರಾಕಾಸ್ತ್ರ ಹಿಡಿದು ಪುಂಡಾಟ ಮೆರೆದಿದ್ದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ರಾಜಿ ಪಂಚಾಯ್ತಿ ವೇಳೆಯಲ್ಲೂ ದಿನೇಶ್, ನನ್ನ ಹಾಗೂ ನನ್ನ ಕುಟುಂಬದ ಮೇಲೆ ಹಲ್ಲೆಗೆ ಮುಂದಾಗಿದ್ದ, ಆಗಲೂ ನಾನು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೆ, ಈಗ ಅದೇ ವೈಷಮ್ಯವನ್ನು ದಿನೇಶ್ ಮುಂದುವರೆಸಿದ್ದಾನೆ. ಇಂದು ಕೋರ್ಟ್‌ಗೆ ಬಂದಿದ್ದಾಗ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ ಎಂದು ಮಂಜುನಾಥ್ ಎಂಬವರು ಆರೋಪಿಸಿದ್ದಾರೆ.
ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ದಾಖಲು : ಪರಸ್ಪರ ಹೊಡೆದಾಟದ ಬಳಿಕ ಮಂಜುನಾಥ್ ಹಾಗೂ ದಿನೇಶ್ ಎಂಬುವರ ಕುಟುಂಬದವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡೂ ಕಡೆಯವರು ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರ ಮೇಲೆ ಒಬ್ಬರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡೂ ಕಡೆಯವರು ಮಾಹಿತಿ ಹಾಗೂ ಬಡಿದಾಟದ ವಿಡಿಯೋ ಸಾಕ್ಷ್ಯಗಳನ್ನಿಟ್ಟುಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.