ನಾವು ತ್ಯಾಗ ಮಾಡಿ ಬಂದವರು, ಲೋಕಸಭಾ ಟಿಕೆಟ್ ನನಗೆ ಕೊಡಬೇಕು: ಬಿ.ಸಿ ಪಾಟೀಲ್

Update: 2024-03-09 17:53 GMT

ಬಿ.ಸಿ. ಪಾಟೀಲ್

ಹಾವೇರಿ: ನಾವು ತ್ಯಾಗ ಮಾಡಿ ಬಂದವರು, ಈಗ ಮನೆಯಲ್ಲಿದ್ದೇವೆ. ನನಗೇ ಟಿಕೆಟ್ ಕೊಡಬೇಕು ಎಂದು ಹಿರೇಕೇರೂರಿನಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. 

ಹಾವೇರಿ-ಗದಗ ಲೋಕಸಭೆ ಬಿಜೆಪಿ ಟಿಕೆಟ್ ಗಾಗಿ ಪಟ್ಟು ಹಿಡಿದಿರುವ ಬಿ.ಸಿ.ಪಾಟೀಲ್, ನಮಗೆ ಹೆದರಿಸುವುದು, ಬೆದರಿಸುವುದು ಎಲ್ಲ ಗೊತ್ತಿಲ್ಲ. ಸೈಲೆಂಟ್ ಇದ್ದೇವೆ ಎಂದರೆ ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗೋನಲ್ಲ. ನನಗೆ ಕೊಡಬೇಕು ಅಂತ ವಾದ ಮಾಡ್ತಾ ಇದ್ದೇನೆ ಎಂದು ಹೇಳಿದ್ದಾರೆ.

ಬಸವರಾಜ್ ಬೊಮ್ಮಾಯಿ ಈಗಾಗಲೇ ಸಿಎಂ ಆಗಿದ್ದಾರೆ. ನಾನು ಹಾವೇರಿ ಹಾಗೂ ಗದಗ ಜಿಲ್ಲೆಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ ಎಂದ ಅವರು, ಕಾಂತೇಶ್ ರಿಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಟಿಕೆಟ್‌ ಸಿಗದಿದ್ದರೆ ಕಾರ್ಯಕರ್ತರ ಜೊತೆ ಮಾತಾಡ್ತೀನಿ. ನನಗೆ ನಂದೇ ಹಾದಿ ಇದೆ. ಹೆಬ್ಬಾರ್, ಎಸ್‍.ಟಿ ಸೋಮಶೇಖರ್ ಹಾದಿ ನನಗೆ ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. 

ಕೃಷಿ ಸಚಿವನಾಗಿ ರೈತರ ಹಿತ ಕಾದಿದ್ದೇವೆ. ಕಾಂತೇಶ್ ಅವರ ಬಗ್ಗೆ ಮಾತಾಡೋಕೆ ಹೋಗಲ್ಲ. ಕಾಂತೇಶ್ ಗೂ ನನಗೆ ಸಂಬಂಧ ಇಲ್ಲ ಎಂದ ಅವರು ಕಾಂತೇಶ್ ಗೆ ಟಿಕೆಟ್ ಕೊಟ್ಟರೆ ಪ್ರಶ್ನಿಸುತ್ತೇನೆ ಎಂದರು.

ಒಬ್ಬ ಗ್ರಾಮ ಪಂಚಾಯತಿ ಸದಸ್ಯನೂ ತನ್ನ ಸ್ಥಾನ ತ್ಯಾಗ ಮಾಡಲ್ಲ. ಆದರೆ ನಾವು ತ್ಯಾಗ ಮಾಡಿದ್ದೇವೆ. ನಮಗೆ ಟಿಕೆಟ್ ಕೊಡುವುದರಲ್ಲಿ ನ್ಯಾಯ ಇದೆ. ನಮ್ಮ ತ್ಯಾಗದಿಂದ ಸರ್ಕಾರ ಬಂತು. 2023ರಲ್ಲಿ ಬಿಜೆಪಿ ಸೋತಿದೆ. ನಾವೆಲ್ಲಾ ಸೋತಿದ್ದೇವೆ, ಈಗ ನಮ್ಮ ಹಿತವನ್ನೂ ಅವರು ಕಾಯಲಿ. ಆ ಜವಾಬ್ದಾರಿ ಅವರಿಗೆ ಇದೆ ಅಲ್ವಾ? ಎಂದು ಬಿಸಿ ಪಾಟೀಲ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News