ಲೆಬನಾನ್ ಪೇಜರ್ ಸ್ಫೋಟ | ಮೃತರ ಸಂಖ್ಯೆ 12ಕ್ಕೆ ಏರಿಕೆ

Update: 2024-09-18 16:15 GMT

PC : X

ಬೈರೂತ್ : ಮಂಗಳವಾರ ಲೆಬನಾನ್‌ ನಲ್ಲಿ ನಡೆದ ಸರಣಿ ಪೇಜರ್ ಸ್ಫೋಟದಲ್ಲಿ ಇಬ್ಬರು ಮಕ್ಕಳ ಸಹಿತ 12 ಮಂದಿ ಸಾವನ್ನಪ್ಪಿದ್ದು 2,800ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಲೆಬನಾನ್‌ ನ ಆರೋಗ್ಯ ಸಚಿವ ಫಿರಾಸ್ ಅಬಿಯಾದ್ ಹೇಳಿದ್ದಾರೆ.

ಸ್ಫೋಟಕ್ಕೆ ಇಸ್ರೇಲ್ ಹೊಣೆ ಎಂದು ಹಿಜ್ಬುಲ್ಲಾ ದೂಷಿಸಿದ್ದು ಪ್ರತೀಕಾರ ಕ್ರಮದ ಎಚ್ಚರಿಕೆ ನೀಡಿದೆ. ಹಮಾಸ್‍ನ ಮಿತ್ರ ಹಿಜ್ಬುಲ್ಲಾವನ್ನು ಗಾಝಾ ಯುದ್ಧದ ವ್ಯಾಪ್ತಿಯೊಳಗೆ ಸೇರಿಸಲು ಗಾಝಾ ಯುದ್ಧದ ಗುರಿಯನ್ನು ವಿಸ್ತರಿಸುವುದಾಗಿ ಮಂಗಳವಾರ ಇಸ್ರೇಲ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಲೆಬನಾನ್‍ನಾದ್ಯಂತ ನೂರಾರು ವಯರ್‍ಲೆಸ್ ಸಾಧನಗಳು(ಪೇಜರ್) ಏಕಕಾಲದಲ್ಲಿ ಸ್ಫೋಟಗೊಂಡಿದ್ದವು.

ಎಲ್ಲಾ ಆಸ್ಪತ್ರೆಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸಾವು-ನೋವಿನ ಸಂಖ್ಯೆಯನ್ನು ಪರಿಷ್ಕರಿಸಲಾಗಿದ್ದು ಇಬ್ಬರು ಮಕ್ಕಳು, ಬೈರೂತ್‍ನ ಖಾಸಗಿ ಆಸ್ಪತ್ರೆಯ 4 ಆರೋಗ್ಯ ಕಾರ್ಯಕರ್ತರ ಸಹಿತ 12 ಮಂದಿ ಹತರಾಗಿದ್ದು 2,750ರಿಂದ 2,800 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ಭದ್ರಕೋಟೆಯಾಗಿರುವ ದಕ್ಷಿಣ ಬೈರೂತ್, ಲೆಬನಾನ್‌ ನ ಪೂರ್ವ ಮತ್ತು ದಕ್ಷಿಣ ಪ್ರಾಂತಗಳಲ್ಲಿ ನೂರಕ್ಕೂ ಅಧಿಕ ಪೇಜರ್‌ ಗಳು ಸ್ಫೋಟಗೊಂಡಿದ್ದವು. ಲೆಬನಾನ್‌ ನ ಪೂರ್ವದಲ್ಲಿರುವ ಬೆಕಾ ಕಣಿವೆಯಲ್ಲಿ ಸಂಭವಿಸಿದ ಸ್ಫೋಟದ ಕೆಲವು ಗಾಯಾಳುಗಳನ್ನು ಸಿರಿಯಾಕ್ಕೆ ವರ್ಗಾಯಿಸಲಾಗಿದೆ. ಇನ್ನು ಕೆಲವು ಗಾಯಾಳುಗಳನ್ನು ಇರಾನ್‍ಗೆ ಸ್ಥಳಾಂತರಿಸಲಾಗುವುದು. ಸುಮಾರು 750 ಗಾಯಾಳುಗಳು ದಕ್ಷಿಣ ಲೆಬನಾನ್‌ ನಲ್ಲಿ, ಸುಮಾರು 150 ಗಾಯಾಳುಗಳು ಬೆಕಾ ಕಣಿವೆಯಲ್ಲಿ ಮತ್ತು ಸುಮಾರು 1,850 ಗಾಯಾಳುಗಳು ಬೈರೂತ್ ಹಾಗೂ ದಕ್ಷಿಣದ ನಗರಗಳಲ್ಲಿದ್ದಾರೆ ಎಂದು ಆರೋಗ್ಯ ಸಚಿವ ಫಿರಾಸ್ ಅಬಿಯಾದ್ ಹೇಳಿದ್ದಾರೆ.

► ಸ್ಫೋಟದಲ್ಲಿ ಬಳಕೆಯಾದ ಪೇಜರ್‌ ಗಳ ಬಗ್ಗೆ ಗೋಲ್ಡ್ ಅಪೋಲೊ ಸಂಸ್ಥೆ ಸ್ಪಷ್ಟನೆ

ಲೆಬನಾನ್‌ ನಲ್ಲಿ ಸ್ಫೋಟಕ್ಕೆ ಬಳಸಲಾದ ಪೇಜರ್‌ ಗಳನ್ನು ತಾನು ಉತ್ಪಾದಿಸಿಲ್ಲ ಎಂದು ತೈವಾನ್‌ ನ ಗೋಲ್ಡ್ ಅಪೋಲೊ ಸಂಸ್ಥೆ ಬುಧವಾರ ಸ್ಪಷ್ಟಪಡಿಸಿದೆ.

ನಾಶಗೊಂಡ ಪೇಜರ್‌ ಗಳ ಹಿಂಬದಿಯ ವಿನ್ಯಾಸ ಮತ್ತು ಸ್ಟಿಕರ್‌ ಗಳು ಗೋಲ್ಡ್ ಅಪೋಲೊ ಉತ್ಪಾದಿಸುವ ಪೇಜರ್‌ ಗಳನ್ನು ಹೋಲುತ್ತವೆ ಎಂದು ಫೋಟ ಸಹಿತ ರಾಯ್ಟರ್ಸ್ ವರದಿ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆ `ಇತ್ತೀಚಿನ ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾದ ಎಆರ್-924 ಪೇಜರ್ ಮಾದರಿಗಳ ಬಗ್ಗೆ ನಾವು ಸ್ಪಷ್ಟನೆ ನೀಡುತ್ತಿದ್ದೇವೆ. ಈ ಬ್ರಾಂಡ್ ಅನ್ನು ಉತ್ಪಾದಿಸಲು ಹಾಗೂ ಮಾರಾಟ ಮಾಡಲು ಹಂಗರಿಯ ಬುಡಾಪೆಸ್ಟ್‍ನಲ್ಲಿರುವ ಬಿಎಸಿ ಸಂಸ್ಥೆ ಲೈಸೆನ್ಸ್ ಪಡೆದಿದೆ' ಎಂದು ಹೇಳಿಕೆ ನೀಡಿದೆ.

ಇಸ್ರೇಲ್ ವಿರುದ್ಧ ಪ್ರತೀಕಾರ : ಹಿಜ್ಬುಲ್ಲಾ ಪ್ರತಿಜ್ಞೆ 

 ಲೆಬನಾನ್‌ ನಲ್ಲಿ ಪೇಜರ್ ಸ್ಫೋಟಕ್ಕೆ ಇಸ್ರೇಲ್ ಹೊಣೆ ಎಂದು ಆರೋಪಿಸಿರುವ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು, ಇಸ್ರೇಲ್ ಈ ದುಷ್ಟ ಕಾರ್ಯಕ್ಕೆ ಸೂಕ್ತ ಶಿಕ್ಷೆಯನ್ನು ಪಡೆಯಲಿದೆ ಎಂದು ಎಚ್ಚರಿಕೆ ನೀಡಿದೆ.

ಈ ಕ್ರಿಮಿನಲ್ ಆಕ್ರಮಣಕ್ಕೆ ನಾವು ಇಸ್ರೇಲನ್ನು ಪೂರ್ಣ ಹೊಣೆಯಾಗಿಸುತ್ತೇವೆ. ಈ ಕ್ರಿಮಿನಲ್ ಕೃತ್ಯಕ್ಕೆ ಅವರು ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ಹಿಜ್ಬುಲ್ಲಾ ಹೇಳಿದೆ.

 

  ಮೊಸಾದ್ ಕೈವಾಡದ ಶಂಕೆ

  ಸ್ಫೋಟಗೊಂಡ ಪೇಜರ್‌ ಗಳಲ್ಲಿ ಲಿಥಿಯಂ ಬ್ಯಾಟರಿ ಮಾತ್ರ ಇರಲಿಲ್ಲ. ಬ್ಯಾಟರಿಯ ಜತೆ ಸಣ್ಣ ಪ್ಲಾಸ್ಟಿಕ್ ಸ್ಫೋಟಕವನ್ನು ಮರೆಮಾಚಿ ಇಟ್ಟಿರುವುದು ಬಹುತೇಕ ಖಚಿತವಾಗಿದ್ದು ಕರೆ ಮಾಡುವ ಅಥವಾ ಸಂದೇಶ ರವಾನಿಸುವ ಮೂಲಕ ದೂರದಲ್ಲಿ ಸ್ಫೋಟಿಸುವ ಪ್ರಕ್ರಿಯೆ ನಡೆದಿದೆ. ಇಸ್ರೇಲ್‍ನ ಗುಪ್ತಚರ ಏಜೆನ್ಸಿ ʼಮೊಸಾದ್' ಪೇಜರ್ ಸರಬರಾಜು ವ್ಯವಸ್ಥೆಯಲ್ಲಿ ಕೈವಾಡ ನಡೆಸಿರುವ ಸಾಧ್ಯತೆಯಿದೆ ಎಂದು ಮಿಡ್ಲ್ ಈಸ್ಟ್ ಇನ್‍ಸ್ಟಿಟ್ಯೂಟ್‍ನ ಚಾಲ್ರ್ಸ್ ಲಿಸ್ಟರ್ ಹೇಳಿದ್ದಾರೆ.

ಹಿಜ್ಬುಲ್ಲಾ ಇತ್ತೀಚೆಗೆ ಆಮದು ಮಾಡಿಕೊಂಡಿದ್ದ 1,000 ಪೇಜರ್‌ ಗಳಲ್ಲಿ ಸ್ಫೋಟಕ ಇರಿಸಿರುವ ಶಂಕೆಯಿದೆ. ಉತ್ಪಾದನೆ ಸಂದರ್ಭದಲ್ಲೇ ಪೇಜರ್ ಒಳಗೆ ಸ್ಫೋಟಕ ಇರಿಸಿರಬಹುದು ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News