ನೆರವು ಪಡೆಯುವ ಪ್ರಯತ್ನದಲ್ಲಿ 12 ಗಾಝಾ ನಿವಾಸಿಗಳು ಮುಳುಗಿ ಮೃತ್ಯು

Update: 2024-03-27 16:06 GMT

Photo : X/@swilkinsonbc

ಗಾಝಾ: ಗಾಝಾ ಬೀಚ್‍ನಲ್ಲಿ ವಿಮಾನದ ಮೂಲಕ ಕೆಳಗೆ ಹಾಕಿದ(ಏರ್‌ ಡ್ರಾಪ್) ನೆರವಿನ ಪ್ಯಾಕೆಟ್‍ಗಳನ್ನು ಹಿಡಿಯುವ ಪ್ರಯತ್ನದಲ್ಲಿ 12 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಫೆಲೆಸ್ತೀನ್‍ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ವಿಮಾನದಿಂದ ಪ್ಯಾರಾಚೂಟ್ ಮೂಲಕ ನೆರವಿನ ಪ್ಯಾಕೆಟ್‍ಗಳಿರುವ ಪೆಟ್ಟಿಗೆಗಳನ್ನು ನೆಲಕ್ಕೆ ಇಳಿಸುತ್ತಿರುವಾಗ ಉತ್ತರ ಗಾಝಾದ ಬೆಯಿತ್ ಲಾಹಿಯಾ ನಗರದ ಬೀಚ್‍ನತ್ತ ಜನರು ಓಡುತ್ತಿರುವುದು, ಸಮುದ್ರದ ನೀರಿನ ಆಳದಲ್ಲಿ ನಿಂತು ನೆರವಿನ ಪ್ಯಾಕೆಟ್‍ಗಳನ್ನು ಹಿಡಿಯಲು ಪ್ರಯತ್ನಿಸುವುದು ಮತ್ತು ಕೆಲವು ಮೃತದೇಹಗಳನ್ನು ದಡಕ್ಕೆ ಎಳೆದು ತರುತ್ತಿರುವ ವೀಡಿಯೊವನ್ನು `ರಾಯ್ಟರ್ಸ್' ಪ್ರಸಾರ ಮಾಡಿದೆ.

ಪ್ಯಾರಾಚೂಟ್‍ನಲ್ಲಿ ಸಮಸ್ಯೆ ಕಂಡುಬಂದ ಕಾರಣ ಗಾಝಾಕ್ಕೆ ಏರ್‌ ಡ್ರಾಪ್ ಮಾಡಲಾದ 18 ಪೆಟ್ಟಿಗೆಗಳು ನೀರಿಗೆ ಬಿದ್ದಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದ್ದು ನೆರವಿನ ಪ್ಯಾಕೆಟ್ ಪಡೆಯುವ ಪ್ರಯತ್ನದಲ್ಲಿ ಮೃತಪಟ್ಟವರ ಬಗ್ಗೆ ಉಲ್ಲೇಖಿಸಿಲ್ಲ. ತೀವ್ರ ಆಹಾರದ ಕೊರತೆಯಿರುವ ಗಾಝಾದಲ್ಲಿ ಕ್ಷಾಮದ ಪರಿಸ್ಥಿತಿಯಿದೆ . ಗಾಝಾದ ಜನತೆಗೆ ತುರ್ತು ಅಗತ್ಯವಿರುವ ನೆರವಿನಲ್ಲಿ 20%ದಷ್ಟು ಮಾತ್ರ ಗಾಝಾ ಪ್ರವೇಶಿಸಲು ಸಾಧ್ಯವಾಗುತ್ತಿದೆ ಎಂದು ನೆರವು ವಿತರಣಾ ಏಜೆನ್ಸಿಗಳು ಹೇಳಿವೆ. ಗಾಝಾಕ್ಕೆ ನೇರವಾಗಿ ವಿತರಣೆಯಾಗುವ ನೆರವು ಹಮಾಸ್ ಕೈಸೇರುತ್ತದೆ. ಆದ್ದರಿಂದ ಇಸ್ರೇಲ್ ಅಥವಾ ಈಜಿಪ್ಟ್ ಗಡಿದಾಟುವಿನ ಮೂಲಕ ಗಾಝಾ ತಲುಪಬೇಕು ಎಂದು ಇಸ್ರೇಲ್ ಪಟ್ಟುಹಿಡಿದಿದೆ. ಗಾಝಾ ಪಟ್ಟಿಗೆ ಅನಿಯಂತ್ರಿತ ನೆರವು ಪ್ರವೇಶಕ್ಕಾಗಿ ದೃಢ ಬದ್ಧತೆಯನ್ನು ಪ್ರದರ್ಶಿಸುವಂತೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಇಸ್ರೇಲ್ ಅನ್ನು ಆಗ್ರಹಿಸಿದ್ದು, ಗಡಿಯಲ್ಲಿ ಟ್ರಕ್‍ಗಳನ್ನು ತಡೆಹಿಡಿದಿರುವುದು ನೈತಿಕ ಹಿಂಸಾಚಾರ ಎಂದಿದ್ದಾರೆ. ಗಾಝಾಕ್ಕೆ, ವಿಶೇಷವಾಗಿ ಉತ್ತರ ಗಾಝಾದಲ್ಲಿ ನೆರವು ವಿತರಣೆ ಕಾರ್ಯ ಜಟಿಲವಾಗಿದೆ. ಕಳೆದ ತಿಂಗಳು ವಾಹನದಿಂದ ನೆರವಿನ ಪ್ಯಾಕೆಟ್ ಪಡೆಯಲು ಗುಂಪು ಸೇರಿದ್ದವರ ಮೇಲೆ ಇಸ್ರೇಲ್ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಗಾಝಾ ಪ್ರವೇಶಿಸುವ ಮಾನವೀಯ ನೆರವಿನ ಪ್ರಮಾಣದ ಮೇಲೆ ಮಿತಿ ವಿಧಿಸಿಲ್ಲ. ಆದರೆ ಗಾಝಾ ಪ್ರದೇಶದಲ್ಲಿ ನೆರವು ವಿತರಣೆ ಕಾರ್ಯ ನಿರ್ವಹಿಸುವ ವಿಶ್ವಸಂಸ್ಥೆಯ ಏಜೆನ್ಸಿ ಯುಎನ್‍ಆರ್‍ಡಬ್ಲ್ಯೂಎ ಅಸಮರ್ಥವಾಗಿದೆ ಎಂದು ಇಸ್ರೇಲ್ ಪ್ರತಿಪಾದಿಸಿದೆ. ಹಮಾಸ್ ಜತೆ ಸಂಪರ್ಕ ಹೊಂದಿರುವುದರಿಂದ ಉತ್ತರ ಗಾಝಾದಲ್ಲಿ ನೆರವು ವಿತರಣೆ ನಡೆಸದಂತೆ ಯುಎನ್‍ಆರ್‍ಡಬ್ಲ್ಯೂಎ ಮೇಲೆ ಇಸ್ರೇಲ್ ನಿಷೇಧ ವಿಧಿಸಿರುವುದಾಗಿ ಇಸ್ರೇಲ್ ಹೇಳಿದೆ. ಇಸ್ರೇಲ್‍ನ ಆರೋಪದ ಬಗ್ಗೆ ತನಿಖೆ ನಡೆಸುವವರೆಗೆ ನೆರವು ಯೋಜನೆಗೆ ದೇಣಿಗೆ ನೀಡುವುದನ್ನು ಸ್ಥಗಿತಗೊಳಿಸುವುದಾಗಿ ಹಲವು ಅಂತರಾಷ್ಟ್ರೀಯ ಸಂಸ್ಥೆಗಳು ಸ್ಪಷ್ಟಪಡಿಸಿವೆ.

ಈ ಮಧ್ಯೆ, ನೆರವು ವಿತರಣೆಗೆ ಯುಎನ್‍ಆರ್‍ಡಬ್ಲ್ಯೂಎ ಮೇಲೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸುವಂತೆ ವಿಶ್ವಸಂಸ್ಥೆ ಮಾನವೀಯ ನೆರವಿನ ಏಜೆನ್ಸಿ ಇಸ್ರೇಲನ್ನು ಆಗ್ರಹಿಸಿದೆ. `ಟ್ರಕ್‍ಗಳ ಮೂಲಕ ನೆರವು ವಿತರಿಸುವುದು ಅತ್ಯುತ್ತಮ, ಸುರಕ್ಷಿತ ಮತ್ತು ತ್ವರಿತ ವಿಧಾನ ಎಂಬುದು ಗಾಝಾದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ವರದಿಯು ದೃಢಪಡಿಸಿದೆ ಎಂದು ಯುಎನ್‍ಆರ್‍ಡಬ್ಲ್ಯೂಎ ಸಂವಹನ ನಿರ್ದೇಶಕಿ ಜೂಲಿಯಟ್ ಟೌಮಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News