ಪಾಕ್‍ನ 40% ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದೆ : ವಿಶ್ವಬ್ಯಾಂಕ್ ವರದಿ

Update: 2023-09-25 16:38 GMT

ಸಾಂದರ್ಭಿಕ ಚಿತ್ರ File Photo

ನ್ಯೂಯಾರ್ಕ್ : ಪಾಕಿಸ್ತಾನದಲ್ಲಿ ಬಡತನದ ಪ್ರಮಾಣ ಹೆಚ್ಚುತ್ತಿದ್ದು ಸುಮಾರು 40% ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ.

ಮಿಲಿಟರಿ, ರಾಜಕೀಯ ಮತ್ತು ಉದ್ಯಮಿಗಳ ಬಲವಾದ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಸಲ್ಪಡುವ ತನ್ನ ನೀತಿ ನಿರ್ಧಾರಗಳನ್ನು ದೇಶ ಈಗ ಅವಲೋಕಿಸಬೇಕಾಗಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಪಾಕಿಸ್ತಾನದಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿಯಾಗಿರುವಂತೆಯೇ ಜಾಗತಿಕ ಹಣಕಾಸು ಸಂಸ್ಥೆ ಎಚ್ಚರಿಕೆಯ ಸಂದೇಶ ನೀಡಿರುವುದು ಮುಂಬರುವ ಸರಕಾರಕ್ಕೆ ಆರಂಭದಲ್ಲೇ ಸೂಕ್ತ ನಿರ್ಧಾರದ ಆಯ್ಕೆಗೆ ನೆರವಾಗಲಿದೆ ಎಂದು `ದಿ ಕ್ಸ್‍ಪ್ರೆಸ್ ಟ್ರಿಬ್ಯೂನಲ್' ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಬಡತನದ ಪ್ರಮಾಣ 39.4%ಕ್ಕೆ ಏರಿಕೆಯಾಗಿದ್ದು ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ 12.5 ದಶಲಕ್ಷದಷ್ಟು ಹೆಚ್ಚುವರಿ ಜನತೆ ಬಡತನದ ವರ್ಗಕ್ಕೆ ಸೇರ್ಪಡೆಗೊಂಡಿದ್ದು, ಈಗ ಪಾಕಿಸ್ತಾನದಲ್ಲಿ ಸುಮಾರು 95 ದಶಲಕ್ಷ ಜನರು ಬಡತನದಲ್ಲಿ ಬದುಕುತ್ತಿದ್ದಾರೆ. ಕಡಿಮೆ ಮಾನವ ಅಭಿವೃದ್ಧಿ, ಸಮರ್ಥನೀಯವಲ್ಲದ ಹಣಕಾಸಿನ ಪರಿಸ್ಥಿತಿ, ಅತಿ ನಿಯಂತ್ರಿತ ಖಾಸಗಿ ವಲಯ, ಕೃಷಿ ಮತ್ತು ಇಂಧನ ಕ್ಷೇತ್ರಗಳ ಸುಧಾರಣೆಗೆ ಮುಂದಿನ ಸರಕಾರ ಆದ್ಯತೆ ನೀಡಬೇಕಾಗಿದೆ ಎಂದು ವಿಶ್ವಬ್ಯಾಂಕ್ ಗುರುತಿಸಿದೆ.

ಪ್ರಸ್ತಾವಿತ ಕ್ರಮಗಳು ಸಮರ್ಥನೀಯವಲ್ಲದ ಆರ್ಥಿಕತೆಯನ್ನು ಮತ್ತೆ ವಿವೇಕಯುತವಾದ ಹಣಕಾಸಿನ ಪಥದಲ್ಲಿ ಇರಿಸುವ ಗುರಿಯನ್ನು ಹೊಂದಿದ್ದು ತೆರಿಗೆ-ಜಿಡಿಪಿ ಅನುಪಾತವನ್ನು ತಕ್ಷಣವೇ 5%ದಷ್ಟು ಹೆಚ್ಚಿಸುವ ಮತ್ತು ಜಿಡಿಪಿಯ ಸುಮಾರು 25%ದಷ್ಟು ವೆಚ್ಚವನ್ನು ಕಡಿತಗೊಳಿಸುವ ಕ್ರಮಗಳನ್ನು ವಿಶ್ವಬ್ಯಾಂಕ್ ಪ್ರಸ್ತಾಪಿಸಿದೆ ಎಂದು `ಎಕ್ಸ್ ಪ್ರೆಸ್ ಟ್ರಿಬ್ಯೂನಲ್' ವರದಿ ಹೇಳಿದೆ.

ಪಾಕಿಸ್ತಾನದಲ್ಲಿ ಈಗಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿಶ್ವಬ್ಯಾಂಕ್ ತೀವ್ರ ಕಳವಳ ಹೊಂದಿದೆ. ಪಾಕಿಸ್ತಾನವು ಗಂಭೀರ ಆರ್ಥಿಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಕಾರ್ಯನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಲು ಇದು ಸಕಾಲವಾಗಿದೆ ಎಂದು ವಿಶ್ವಬ್ಯಾಂಕ್‍ನ ಪ್ರಮುಖ ಆರ್ಥಿಕತಜ್ಞ ತೊಬಾಯ್ಸ್ ಹಕ್ ಹೇಳಿದ್ದಾರೆ.

ಸರಕಾರದ ಆದಾಯವನ್ನು ಬಲಪಡಿಸುವ ಬ್ಯಾಂಕ್‍ನ ಟಿಪ್ಪಣಿಯು ತೆರಿಗೆ ವಿನಾಯಿತಿಗಳನ್ನು ಹಿಂದೆಗೆದುಕೊಳ್ಳುವ ಮೂಲಕ ಮತ್ತು ರಿಯಲ್ ಎಸ್ಟೇಟ್ ಹಾಗೂ ಕೃಷಿ ಕ್ಷೇತ್ರಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಆದಾಯ-ಜಿಡಿಪಿ ಅನುಪಾತವನ್ನು ಶೇ.5ರಷ್ಟು ಸುಧಾರಿಸಲು ಹಲವಾರು ಕ್ರಮಗಳನ್ನು ತೋರಿಸಿದೆ ಎಂದು `ಎಕ್ಸ್‍ಪ್ರೆಸ್ ಟ್ರಿಬ್ಯೂನಲ್' ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News