ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ: ಐವರು ಮಕ್ಕಳು ಸೇರಿ ಒಂಬತ್ತು ಮಂದಿ ಮೃತ್ಯು
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪೊಲೀಸ್ ವಾಹನವನ್ನು ಗುರಿ ಮಾಡಿ ನಡೆಸಿದ ಬಾಂಬ್ ದಾಳಿ, ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಮೇಲೆ ತಿರುಗಿ ಐದು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಇತರ 27 ಮಂದಿ ಗಾಯಗೊಂಡಿದ್ದಾರೆ.
ಪ್ರಾಂತ್ಯದ ಮತ್ಸಂಗ್ ಜಿಲ್ಲೆಯ ಸಿವಿಲ್ ಆಸ್ಪತ್ರೆ ಚೌಕದ ಬಳಿಯ ಬಾಲಕಿಯರ ಹೈಸ್ಕೂಲ್ ಪಕ್ಕ ಈ ದಾಳಿ ಬೆಳಿಗ್ಗೆ ನಡೆದಿದೆ. ಐದು ಮಕ್ಕಳು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮತ್ಸಂಗ್ ಜಿಲ್ಲಾ ಪೊಲೀಸ್ ಅಧಿಕಾರಿ ಮಿಯಾಂದಾದ್ ಉರ್ಮಾನಿ ದೃಢಪಡಿಸಿದ್ದಾರೆ. ಒಬ್ಬ ಗಾಯಾಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
"ಘಟನೆಯಲ್ಲಿ ಸುಮಾರು 27 ಮಂದಿ ಗಾಯಗೊಂಡಿದ್ದು, ನಾಗರಿಕರು ಹಲವು ಮಂದಿ ಗಾಯಾಳುಗಳನ್ನು ತಾವೇ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಕೆಲ ಮಂದಿ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ" ಎಂದು ಅವರು ವಿವರಿಸಿದ್ದಾರೆ.
ಯಾವುದೇ ಸಂಘಟನೆಗಳು ಈ ದಾಳಿಯ ಹೊಣೆ ಹೊತ್ತಿಲ್ಲವಾದರೂ, ಬುಡಕಟ್ಟು ಜನಾಂಗಕ್ಕೆ ಸೇರಿದ ಬಲೂಚ್ ಉಗ್ರರು ಮತ್ತು ತಾಲಿಬಾನ್ ಉಗ್ರರು ಈ ಭಾಗದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಾ ಬಂದಿದ್ದಾರೆ.
ಟೈಮರ್ ಮೂಲಕ ಸಿಡಿಸುವ ಐಇಡಿ ಬಾಂಬ್ನ ಗುರಿ ಹೈಸ್ಕೂಲ್ ಮತ್ತು ಆಸ್ಪತ್ರೆಯ ಕೆಲವೇ ಮೀಟರ್ ಆಂತರದಲ್ಲಿ ನಿಲ್ಲಿಸಿದ್ದ ಪೊಲೀಸ್ ವ್ಯಾನ್ ಆಗಿತ್ತು ಎಂದು ಅವರು ಹೇಳಿದ್ದಾರೆ. ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಮೋಟರ್ಬೈಕ್ನಲ್ಲಿ ಹುದುಗಿಸಿದ್ದ ಸ್ಫೋಟಕವನ್ನು ರಿಮೋಟ್ ಸಾಧನದ ಮೂಲಕ ಸ್ಫೋಟಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.