ಅಫ್ಘಾನಿಸ್ತಾನ: ಪ್ರವಾಹದ ಅಬ್ಬರಕ್ಕೆ 33 ಬಲಿ, 606 ಮನೆಗಳಿಗೆ ಹಾನಿ
ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಶುಕ್ರವಾರದಿಂದ ಭಾರೀ ಮಳೆ ಹಾಗೂ ಮಂಜು ಸುರಿಯುತ್ತಿದ್ದು ಹಲವೆಡೆ ದಿಢೀರ್ ಪ್ರವಾಹದ ಸಮಸ್ಯೆ ಎದುರಾಗಿದೆ. ಕನಿಷ್ಠ 33 ಮಂದಿ ಸಾವನ್ನಪ್ಪಿದ್ದು 27 ಮಂದಿ ಗಾಯಗೊಂಡಿದ್ದಾರೆ. 606 ಮನೆಗಳು ನಾಶಗೊಂಡಿವೆ ಎಂದು `ಟೋಲೊ ನ್ಯೂಸ್' ವರದಿ ಮಾಡಿದೆ.
ಕಳೆದ ಕೆಲ ದಿನಗಳಿಂದ ಪ್ರವಾಹದ ಸಮಸ್ಯೆಯಿಂದಾಗಿ 33 ಮಂದಿ ಸಾವನ್ನಪ್ಪಿದ್ದು ಇತರ 27 ಮಂದಿ ಗಾಯಗೊಂಡಿದ್ದಾರೆ. 606 ಮನೆಗಳು ಭಾಗಶಃ ಅಥವಾ ಸಂಪೂರ್ಣ ಹಾನಿಗೊಂಡಿವೆ. ಫರಾಹ್, ಹೆರಾತ್, ಝಬೂಲ್ ಮತ್ತು ಕಂದಹಾರ್ ಪ್ರಾಂತಗಳಲ್ಲಿ ಭಾರೀ ಹಾನಿ ಮತ್ತು ನಷ್ಟ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ವಕ್ತಾರ ಜನಾನ್ ಸಯೀಕ್ ಹೇಳಿದ್ದಾರೆ. ಎಪ್ರಿಲ್ ಆರಂಭದಿಂದ ನೆರವಿನ ಅಗತ್ಯವಿರುವ 22 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ರಾಷ್ಟ್ರೀಯ ಮತ್ತು ವಿದೇಶಿ ನೆರವನ್ನು ಹಸ್ತಾಂತರಿಸಲಾಗಿದೆ. ಮತ್ತಷ್ಟು ಮಳೆಯ ಮುನ್ಸೂಚನೆ ಇರುವುದರಿಂದ ಪ್ರವಾಹಕ್ಕೆ ಸಂಬಂಧಿಸಿದ ನಾಶ-ನಷ್ಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ ನೀಡಿದೆ.