ಅಫ್ಘಾನ್: ತೀವ್ರ ಹಿಮಪಾತ 15 ಮಂದಿ ಮೃತ್ಯು; 30 ಮಂದಿಗೆ ಗಾಯ
ಕಾಬೂಲ್ : ಅಫ್ಘಾನಿಸ್ತಾನದ ಹಲವು ಪ್ರಾಂತಗಳಲ್ಲಿ ಕಳೆದ 3 ದಿನಗಳಿಂದ ವ್ಯಾಪಕವಾದ ಭಾರೀ ಹಿಮಪಾತದಿಂದ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ `ಟೋಲೊ ನ್ಯೂಸ್' ವರದಿ ಮಾಡಿದೆ.
ಬಾಲ್ಕ್ ಮತ್ತು ಫರ್ಯಾಬ್ ಪ್ರಾಂತಗಳಲ್ಲಿ ವ್ಯಾಪಕ ವಿನಾಶ ಸಂಭವಿಸಿದ್ದು ಸುಮಾರು 10,000 ಜಾನುವಾರುಗಳು ಸಾವನ್ನಪ್ಪಿವೆ. ಹಿಮಪಾತದಿಂದಾಗಿ ಹಲವು ಮನೆಗಳು, ಪ್ರಮುಖ ರಸ್ತೆಗಳು ಹಿಮದ ರಾಶಿಯಡಿ ಸಿಲುಕಿದ್ದು ಜನ ಮತ್ತು ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ. ಜಾನುವಾರುಗಳಿಗೆ ಮೇವು ಮತ್ತು ಆಹಾರ ಒದಗಿಸುವುದಕ್ಕೆ ಅಡ್ಡಿಯಾಗಿದ್ದು ಸ್ಥಳೀಯಾಡಳಿತ ಸಮಸ್ಯೆಗೆ ಕ್ಷಿಪ್ರವಾಗಿ ಸ್ಪಂದಿಸುತ್ತಿಲ್ಲ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಮಪಾತದಿಂದ ಆಗಿರುವ ಹಾನಿಗಳ ಬಗ್ಗೆ, ವಿಶೇಷವಾಗಿ ಜಾನುವಾರುಗಳ ಮಾಲಕರಿಗೆ ಆಗಿರುವ ನಷ್ಟದ ಬಗ್ಗೆ ಪರಿಶೀಲನೆ ನಡೆಸಲು ವಿವಿಧ ಸಚಿವರನ್ನೊಳಗೊಂಡ ಸಮಿತಿಯನ್ನು ರಚಿಸಿರುವುದಾಗಿ ಸರಕಾರ ಘೋಷಿಸಿದೆ. ಬಾಲ್ಕ್, ಜಾವ್‍ಝಾನ್, ಬದ್‍ಘೀಸ್, ಫರ್ಯಾಬ್ ಮತ್ತು ಹೆರಾತ್ ಪ್ರಾಂತಗಳಲ್ಲಿ ಜಾನುವಾರು ಮಾಲಕರಿಗೆ 50 ದಶಲಕ್ಷ ಅಫ್ಘಾನಿಸ್(ಅಫ್ಘಾನಿಸ್ತಾನದ ಕರೆನ್ಸಿ) ಮೊತ್ತವನ್ನು ತೆಗೆದಿರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (1 ಅಫ್ಘಾನಿಸ್ ಎಂದರೆ ಭಾರತದ ಸುಮಾರು 1.15 ರೂ.ಗೆ ಸಮ).
ಎಲ್ಲಾ ಪ್ರಾಂತಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ವೇಗ ನೀಡುವುದು, ರಸ್ತೆಯನ್ನು ಮುಚ್ಚಿರುವ ಹಿಮದ ರಾಶಿಯನ್ನು ತೆರವುಗೊಳಿಸುವುದು ಮತ್ತು ಸಂತ್ರಸ್ತ ಪ್ರದೇಶಗಳಿಗೆ ಆಹಾರ ಮತ್ತು ಮೇವನ್ನು ವಿತರಿಸುವುದು `ತ್ವರಿತ ಪ್ರತಿಕ್ರಿಯೆ ಸಮಿತಿ'ಯ ಕೆಲಸವಾಗಿದೆ ಎಂದು ಕೃಷಿ, ನೀರಾವರಿ ಮತ್ತು ಜಾನುವಾರು ಇಲಾಖೆಯ ವಕ್ತಾರ ಮಿಸ್ಬಹುದ್ದೀನ್ ಮುಸ್ತಾಯೀನ್ ಹೇಳಿದ್ದಾರೆ.
ಸಲಾಂಗ್ ಪಾಸ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತೊಡಕಾಗಿದ್ದು ಘೋರ್, ಬದ್ಘೀಸ್, ಘಜನಿ, ಹೆರಾತ್ ಮತ್ತು ಬಾಮ್ಯಾನ್ ಪ್ರಾಂತಗಳಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಲೊಕೋಪಯೋಗಿ ಇಲಾಖೆಯ ವಕ್ತಾರ ಮಾಹಿತಿ ನೀಡಿದ್ದಾರೆ.