ಆಫ್ರಿಕನ್ ಯೂನಿಯನ್‍ಗೆ ಜಿ20 ಸದಸ್ಯತ್ವಕ್ಕೆ ಒಪ್ಪಿಗೆ
ನ್ಯೂಯಾರ್ಕ್: ಯುರೋಪಿಯನ್ ಯೂನಿಯನ್‍ಗೆ ಸಮಾನವಾಗಿ ಆಫ್ರಿಕನ್ ಯೂನಿಯನ್‍ಗೂ ಜಿ20 ಒಕ್ಕೂಟದ ಕಾಯಂ ಸದಸ್ಯತ್ವ ನೀಡಲು ಸದಸ್ಯ ದೇಶಗಳು ಒಪ್ಪಿವೆ ಎಂದು ಬ್ಲೂಮ್‍ಬರ್ಗ್ ನ್ಯೂಸ್ ಗುರುವಾರ ವರದಿ ಮಾಡಿದೆ.
ಇದುವರೆಗೆ ಜಿ20 ಒಕ್ಕೂಟದ `ಆಹ್ವಾನಿತ ಅಂತರಾಷ್ಟ್ರೀಯ ಸಂಘಟನೆ' ಎಂಬ ಸ್ಥಾನಮಾನ ಹೊಂದಿದ್ದ ಆಫ್ರಿಕನ್ ಯೂನಿಯನ್(ಆಫ್ರಿಕಾ ಖಂಡದ 55 ದೇಶಗಳ ಸಂಘಟನೆ) ಇನ್ನು ಮುಂದೆ ಯುರೋಪಿಯನ್ ಯೂನಿಯನ್‍ನಂತೆಯೇ ಕಾಯಂ ಸದಸ್ಯತ್ವ ಹೊಂದಲಿದೆ ಎಂದು ವರದಿ ಹೇಳಿದೆ.
ಆಫ್ರಿಕನ್ ಯೂನಿಯನ್‍ಗೆ ಸದಸ್ಯತ್ವ ನೀಡಲು ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಆದರೆ ಮುಂದಿನ ವರ್ಷ ಬ್ರೆಝಿಲ್ ಜಿ20 ಅಧ್ಯಕ್ಷತೆ ವಹಿಸಿದ ಬಳಿಕವಷ್ಟೇ ಸದಸ್ಯತ್ವ ಅಧಿಕೃತಗೊಳ್ಳಲಿದೆ ಎಂದು ಭಾರತದ ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಆಫ್ರಿಕನ್ ಯೂನಿಯನ್‍ಗೆ ಪೂರ್ಣಪ್ರಮಾಣದ ಮತ್ತು ಕಾಯಂ ಸದಸ್ಯತ್ವ ನೀಡುವ ಪ್ರಸ್ತಾವನೆಯನ್ನು ಜೂನ್‍ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜಿ20 ಸಭೆಯಲ್ಲಿ ಮಂಡಿಸಿದ್ದರು. ಜಿ20 ಒಕ್ಕೂಟದಲ್ಲಿ ಈಗ 19 ದೇಶಗಳು ಹಾಗೂ ಯುರೋಪಿಯನ್ ಯೂನಿಯನ್ ಸದಸ್ಯರಾಗಿವೆ. ಆಫ್ರಿಕನ್ ಯೂನಿಯನ್‍ನ ಸದಸ್ಯತ್ವದ ಬಗ್ಗೆ ಹೊಸದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.