ಲ್ಯಾಪ್ ಟಾಪ್ ಆಮದು ನಿರ್ಬಂಧಿಸಿದ ಭಾರತದ ನಿರ್ಧಾರದ ಬಗ್ಗೆ ಅಮೆರಿಕ ಕಳವಳ
ವಾಷಿಂಗ್ಟನ್: ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಗಳ ಆಮದಿನ ಮೇಲೆ ನಿರ್ಬಂಧ ವಿಧಿಸುವ ಭಾರತದ ನಿರ್ಧಾರದ ಬಗ್ಗೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಕಳವಳ ವ್ಯಕ್ತಪಡಿಸಿವೆ.
ಸೋಮವಾರ ಜಿನೆವಾದಲ್ಲಿ ನಡೆದ ವಿಶ್ವ ವ್ಯಾಪಾರ ಸಂಘಟನೆ(ಡಬ್ಯ್ಲುಟಿಒ)ಯ ಮಾರುಕಟ್ಟೆ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತು. ವಿಷಯ ಪ್ರಸ್ತಾವಿಸಿದ ಅಮೆರಿಕ ಈ ನಿರ್ಧಾರವು ಭಾರತಕ್ಕೆ ಅಮೆರಿಕದ ರಫ್ತು ಸೇರಿದಂತೆ ಲ್ಯಾಪ್ ಟಾಪ್, ಕಂಪ್ಯೂಟರ್ ಗಳ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ರಫ್ತುದಾರರು ಮತ್ತು ಬಳಕೆದಾರರಲ್ಲಿ ಅನಿಶ್ಚಿತತೆಗೆ ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿತು. ಈ ಕ್ರಮಗಳ ಅನುಷ್ಟಾನವನ್ನು ಮರುಪರಿಶೀಲಿಸುವಂತೆ ಮತ್ತು ಈ ವಿಷಯದ ಕುರಿತು ವಿವರವಾದ ಸ್ಪಷ್ಟೀಕರಣ ಮತ್ತು ಮಾಹಿತಿ ಒದಗಿಸುವಂತೆ ಭಾರತವನ್ನು ದಕ್ಷಿಣ ಕೊರಿಯಾ ಕೋರಿದೆ.
ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಚೀನಾದಂತಹ ದೇಶಗಳಿಂದ ಆಮದನ್ನು ಕಡಿತಗೊಳಿಸುವ ಉದ್ದೇಶದಿಂದ ಲ್ಯಾಪ್ ಟಾಪ್, ಪಿಸಿ(ಪರ್ಸನಲ್ ಕಂಪ್ಯೂಟರ್ಸ್), ಮೈಕ್ರೋ ಕಂಪ್ಯೂಟರ್ ಸೇರಿದಂತೆ ಐಟಿ ಹಾರ್ಡ್ ವೇರ್ ಮತ್ತು ಕೆಲವು ಡಾಟಾ ಪ್ರೊಸೆಸಿಂಗ್ ಸಾಧನಗಳ ಆಮದಿನ ಮೇಲೆ ಆಗಸ್ಟ್ 3ರಂದು ಭಾರತ ನಿರ್ಬಂಧ ಹೇರಿದ್ದು ಇದು ನವೆಂಬರ್ 1ರಂದು ಜಾರಿಗೆ ಬರಲಿದೆ. ಭಾರತ ಪ್ರತೀ ವರ್ಷ ಸುಮಾರು 8 ಶತಕೋಟಿ ಡಾಲರ್ ಮೌಲ್ಯದ ಕಂಪ್ಯೂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ.