ಹಮಾಸ್ ಮಕ್ಕಳ ಶಿರಚ್ಛೇದ ಮಾಡಿದೆ ಎಂದು ವರದಿ ಮಾಡಿದ್ದ ಸಿಎನ್‌ಎನ್ ವರದಿಗಾರ್ತಿಯಿಂದ ಕ್ಷಮೆಯಾಚನೆ
ಟೆಲ್ ಅವೀವ್: ಹಮಾಸ್ ಸಂಘಟನೆಯ ಹೋರಾಟಗಾರರು ಇಸ್ರೇಲ್ ಮಕ್ಕಳ ಶಿರಚ್ಛೇದ ಮಾಡಿದ್ದಾರೆ ಎಂದು ವರದಿ ಮಾಡಿದ್ದ ಸಿಎನ್‌ಎನ್ ವರದಿಗಾರ್ತಿ ಸಾರಾ ಸಿಡ್ನರ್ ಅವರು ಕ್ಷಮೆಯಾಚಿಸಿದ್ದಾರೆ.
ಇಸ್ರೇಲ್ ಪ್ರಧಾನ ಮಂತ್ರಿ ಕಛೇರಿ ನೀಡಿದ್ದ ಹೇಳಿಕೆಯನ್ನು ಧೃಡೀಕರಿಸದೇ ವರದಿ ಮಾಡಿದ್ದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
“ಹಮಾಸ್ ಶಿಶುಗಳ ಮತ್ತು ಮಕ್ಕಳ ಶಿರಚ್ಛೇದ ಮಾಡಿದೆ ಎಂದು ನಿನ್ನೆ ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿಯು ಹೇಳಿತ್ತು. ಆದರೆ, ಇಂದು ಇಸ್ರೇಲ್ ಸರ್ಕಾರವು ಶಿಶುಗಳ ಶಿರಚ್ಛೇದವನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನಾನು ನನ್ನ ಮಾತುಗಳ ಬಗ್ಗೆ ಹೆಚ್ಚು ಜಾಗರೂಕಳಾಗಿರಬೇಕಿದೆ. ನನ್ನನ್ನು ಕ್ಷಮಿಸಿ" ಎಂದು ಸಿಡ್ನರ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೇರಿಕಾದ ಅಧ್ಯಕ್ಷ ಜೊ ಬೈಡನ್ ಅವರು ಕೂಡಾ ಮಕ್ಕಳ ಶಿರಚ್ಛೇದ ಮಾಡಿರುವುದರ ಬಗ್ಗೆ ಮಾತನಾಡಿ, ಹಮಾಸ್ ಅನ್ನು ಖಂಡಿಸಿದ್ದರು.
ಈ ಬಗ್ಗೆಯೂ ಸಿಡ್ನರ್ ತಿಳಿಸಿದ್ದು, ನಾನು ಹೇಳಿರುವುದನ್ನೇ ಜೋ ಬೈಡನ್ ಕೂಡಾ ಹೇಳಿದ್ದರು. ಆದರೆ, ಈಗ ಅದನ್ನು ಹಿಂಪಡೆಯಲಾಗಿದೆ ಎಂದು ಸಿಡ್ನರ್ ಹೇಳಿದ್ದಾರೆ.
ಸಿಎನ್‌ಎನ್ ಕೂಡಾ ಈ ಬಗ್ಗೆ ವರದಿಯನ್ನು ಮಾಡಿದ್ದು, ಇಸ್ರೇಲಿ ಅಧಿಕಾರಿಗಳು ಈಗ ಸುದ್ದಿಯನ್ನು ಧೃಡೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿಸಿದೆ.
ಮಾತ್ರವಲ್ಲದೆ, ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಕೂಡಾ, ಮಕ್ಕಳ ಶಿರಚ್ಛೇದ ಮಾಡಿರುವುದಕ್ಕೆ ನಾನು ಪುರಾವೆಗಳನ್ನು ನೋಡಿದ್ದೇನೆ ಎಂದು ಹೇಳಿದ್ದರು. ಈ ಬಗ್ಗೆ ಸಿಎನ್‌ಎನ್ ಅಮೇರಿಕಾದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಜೋ ಬೈಡನ್ ಈ ಬಗ್ಗೆ ಫೋಟೋಗಳನ್ನು ನೋಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಬೈಡನ್ ಅಥವಾ ಅವರ ಸಹಾಯಕರು ಹಮಾಸ್‌ನಿಂದ ಶಿರಚ್ಛೇದ ಮಾಡಿದ ಮಕ್ಕಳು ಅಥವಾ ಶಿಶುಗಳ ದೃಢೀಕೃತ ವರದಿಗಳನ್ನು ಸ್ವೀಕರಿಸಿಲ್ಲ ಅಥವಾ ಚಿತ್ರಗಳನ್ನು ನೋಡಿಲ್ಲ” ಎಂದು ಅಮೇರಿಕಾದ ಆಡಳಿತಾಧಿಕಾರಿಯೊಬ್ಬರು ಸ್ಪಷ್ಟಪಡಿಸಿರುವುದಾಗಿ CNN ವರದಿ ಮಾಡಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗಳು ಶುರುವಾಗಿದ್ದು, ಫೆಲೆಸ್ತೀನರನ್ನು ಜಗತ್ತಿನ ಮುಂದೆ ಪೈಶಾಚಿಕರನ್ನಾಗಿ ಬಿಂಬಿಸಿ, ತನ್ನ ದಮನಕಾರಿ ನೀತಿಯನ್ನ ಜಾಗತಿಕವಾಗಿ ಸಮರ್ಥಿಸುವ ಇಸ್ರೇಲ್‌ನ ಯುದ್ಧ ಸಂಚು ಇದು ಎಂದು ಹಲವರು ಆರೋಪಿಸಿದ್ದಾರೆ.
ಸಿಎನ್‌ಎನ್ ವರದಿಗಾರ್ತಿಯನ್ನೂ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದು, ನೀವು ಈಗ ಕ್ಷಮೆ ಕೇಳಿದರೆ, ಫೆಲೆಸ್ತೀನ್ ಏನೂ ಉಳಿಯುವುದಿಲ್ಲ, ನಿಮ್ಮ ಸುಳ್ಳುಗಳು ಈಗಾಗಲೇ ಚಕ್ರ ಕಟ್ಟಿಕೊಂಡು ಜಗತ್ತನ್ನು ಸುತ್ತಿ ಬಂದಿದೆ ಎಂದು ಟೀಕಿಸಿದ್ದಾರೆ.